ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಮಂಗಳೂರು : ರಾಜ್ಯದಲ್ಲಿ ಸುಮಾರು 49 ಸಾವಿರದಷ್ಟು ಮಂದಿ ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಸಂಖ್ಯೆ ಅತ್ಯಂತ ಆತಂಕಾರಿಯಾಗಿದೆ. ಮತ್ತೊಮ್ಮೆ ಡಿಹೆಚ್ಒ ಹಾಗೂ ಆಶಾ - ಅಂಗನವಾಡಿ ಕಾರ್ಯಕರ್ತೆಯರ ಮಟ್ಟದಲ್ಲಿ ರೀ ಸರ್ವೇ ಮಾಡಲಾಗುತ್ತದೆ. ಪರಿಶೀಲನೆ ಮಾಡುವ ಸಂದರ್ಭ ಅಪ್ರಾಪ್ತ ಗರ್ಭಿಣಿಯರಲ್ಲಿಯೇ ಕೂಲಂಕಷವಾಗಿ ಮಾಹಿತಿ ಪಡೆದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ, ಮಂಡ್ಯ ಭಾಗದಲ್ಲಿ ಹೆಚ್ಚಿನ ಪ್ರಕರಣಗಳು ಲಭ್ಯವಾಗಿದೆ. ಹದಿನೆಂಟು ತುಂಬುವ ಮೊದಲೇ ವಿವಾಹ, ಅತ್ಯಾಚಾರ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ ಹೀಗೆ ಹಲವಾರು ರೀತಿಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯರಾಗುತ್ತಿರುವ ಪ್ರಕರಣಗಳು ಬಯಲಾಗುತ್ತಿದೆ. ಇಂತಹ ಪ್ರಕರಣಗಳು ಬಹಳ ಸೂಕ್ಷ್ಮವಾಗಿದ್ದು, ಸಂತ್ರಸ್ತ ಬಾಲಕಿಯರಿಗೆ ಹೆಚ್ಚಿನ ಮಟ್ಟದ ಸಾಂತ್ವನದ ಅಗತ್ಯವಿದೆ. ಕೆಲವೊಂದು ಪ್ರಕರಣಗಳಲ್ಲಿ ಸಂತ್ರಸ್ತೆಯರು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಗಳೂ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳನ್ನು ಮುಚ್ಚಿಟ್ಟ ವಿಚಾರದಲ್ಲಿ ಈಗಾಗಲೇ 6 - 7 ವೈದ್ಯರ ಮೇಲೆಯೇ ಪ್ರಕರಣ ದಾಖಲಾಗಿದೆ. ಅಲ್ಲದೆ ಒಂದೆರಡು ನರ್ಸಿಂಗ್ ಹೋಮ್ಗಳನ್ನೇ ಮುಚ್ಚಲಾಗಿದೆ ಎಂದರು.
ಆದ್ದರಿಂದ ಮಕ್ಕಳಿಗೆ 18ವರ್ಷದವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯುವಂತೆ ಮಾಡಬೇಕು. ಅದಕ್ಕಾಗಿ ಡಿಡಿಪಿಐ ಹಾಗೂ ಬಿಇಒ ಅವರುಗಳು ಮಕ್ಕಳು 18 ವರ್ಷಗಳವರೆಗೆ ಶಾಲೆ - ಕಾಲೇಜು ತೊರೆಯದಂತೆ ಗಮನಹರಿಸಬೇಕು. ಪರಿಣಾಮ 90 ಪ್ರತಿಶತ ಬಾಲ್ಯ ಕಾರ್ಮಿಕ, ಬಾಲ್ಯ ವಿವಾಹವನ್ನು ತಪ್ಪಿಸಿದಂತಾಗುತ್ತದೆ ಎಂದು ನಾಗಣ್ಣ ಗೌಡ ಹೇಳಿದರು.
ಮಕ್ಕಳ ಜತೆ ಕೆಲಸ ಮಾಡುವ ಸಂಸ್ಥೆಗಳು, ಶಿಕ್ಷಕರು, ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೋಷಕರು ಮಕ್ಕಳ ರಕ್ಷಣೆ ಬಗ್ಗೆ ಗಮನ ಹರಿಸಬೇಕು. ಆರೋಗ್ಯ ಇಲಾಖೆ ನೀಡಿದ ವರದಿಯಲ್ಲಿ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿರುವುದು, ಮಾದಕ ದ್ರವ್ಯ ವ್ಯಸನಿಯಾಗಿರುವುದೇ ಮೊದಲಾದ ಪ್ರಕರಣಗಳು ಕಂಡುಬಂದಿವೆ. ಮೊಬೈಲ್ ಬಳಕೆ ಪರಿಣಾಮ ಇದರಲ್ಲಿ ಕಂಡುಬಂದಿದೆ. ಪರಿಚಯಕ್ಕಿಂತ ಮೊಬೈಲ್ ಸ್ನೇಹದಿಂದಾಗಿ ಇಂತಹ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದರು.
ಮಕ್ಕಳಿಗೆ ಹೊಡೆದು, ಬಡಿದು ಇದನ್ನು ಸರಿಪಡಿಸಲು ಸಾಧ್ಯವಾಗದು. ಮಕ್ಕಳು ಶಾಲೆಯಿಂದ ದೂರವಾಗದಂತೆ ನೋಡಿಕೊಳ್ಳಬೇಕು. ಪ್ರೀತಿಯಿಂದ ಮಕ್ಕಳ ಮನಸ್ಸು ಗೆದ್ದು, ತಿಳಿವಳಿಕೆ ನೀಡುವ ಮೂಲಕ ಸಾಮಾಜಿಕ ಪಿಡುಗುಗಳಿಂದ ದೂರ ಇರಿಸಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತೆ ಕಡ್ಡಾಯ ಪಾಲನೆಗೆ ಕ್ರಮ ಕೈಗೊಳ್ಳಬೇಕು. 18 ವರ್ಷದೊಳಗಿನ ಮಕ್ಕಳು ಶೈಕ್ಷಣಿಕ ವಾತಾವರಣದಲ್ಲೇ ಇರುವಂತೆ ನೋಡಿಕೊಳ್ಳಬೇಕು. ಕರ್ನಾಟಕ ಸರ್ಕಾರ 2016ರಲ್ಲಿ ಜಾರಿಗೆ ತಂದ ಮಕ್ಕಳ ಹಕ್ಕುಗಳ ಕಾಯ್ದೆ ಪ್ರಕಾರ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಮಾದಕ ವಸ್ತು, ದೌರ್ಜನ್ಯಗಳಿಂದ ಮಕ್ಕಳು ದೂರ ಇರುವಂತೆ ನೋಡಿಕೊಳ್ಳಬೇಕು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ, 18 ವರ್ಷದವರೆಗೆ ಮಕ್ಕಳು ಶಿಕ್ಷಣ ವಾತಾವರಣದಲ್ಲಿ ಇರಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧವೇ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇದೆ ಎಂದರು.
ಮಕ್ಕಳ ಜೀವ ಹಾಗೂ ಜೀವನ ಬಹುಮುಖ್ಯ. ಇದರ ಜತೆ ಯಾರಿಗೂ ಚೆಲ್ಲಾಟವಾಡಲು ಆಯೋಗ ಅವಕಾಶ
ನೀಡುವುದಿಲ್ಲ. ಎಸ್‌ಎಸ್‌ಎಲ್‌ಸಿ, ಪಿಯು ಮಕ್ಕಳಿಗೆ ಪೋಕ್ಸೋ, ಡ್ರಗ್ಸ್ ಇತ್ಯಾದಿ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ. ಅದಕ್ಕಾಗಿಯೇ ಸುಮಾರು 21 ವಿವಿಧ ಇಲಾಖೆಗಳನ್ನು ಆಯೋಗದ ವ್ಯಾಪ್ತಿಗೆ ಒಳಗೊಳ್ಳುವಂತೆ ಮಾಡಲಾಗಿದೆ. ಮಕ್ಕಳ ರಕ್ಷಣೆಗೆ ಎಲ್ಲರೂ ಜವಾಬ್ದಾರಿ ಹೊಂದಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ:ಮಂಡ್ಯ: ಭ್ರೂಣ ಪತ್ತೆ, ಹತ್ಯೆ ಪ್ರಕರಣ... ಘಟನಾ ಸ್ಥಳಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಭೇಟಿ