ಮಂಗಳೂರು/ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ತಿಂಗಳಾಡಿ ಎಂಬಲ್ಲಿ ಅಂಗಡಿಯಿಂದ ಹಾಡಹಗಲೇ ಹಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು 48 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಗಡಿಯಿಂದ ಹಾಡಹಗಲೇ 1 ಲಕ್ಷ ರೂ. ಕಳವು... 48 ಗಂಟೆಯೊಳಗೆ ಆರೋಪಿ ಬಂಧನ - ಕಳ್ಳತನ
ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ಮಾತೃಶ್ರೀ ಕಾಂಪ್ಲೆಕ್ಸ್ ಅಂಗಡಿಯೊಂದರಲ್ಲಿ ಒಂದು ಲಕ್ಷ ಹಣ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೆ. 14 ರಂದು ಮಧ್ಯಾಹ್ನ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ಮಾತೃಶ್ರೀ ಕಾಂಪ್ಲೆಕ್ಸ್ನ ಅಂಗಡಿಯೊಂದರಿಂದ ಆರೋಪಿ 1 ಲಕ್ಷ ಹಣ ಕಳವು ಮಾಡಿದ್ದ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಪುತ್ತೂರು ಗ್ರಾಮಾಂತರ ಠಾಣೆ, ಉಪ್ಪಿನಂಗಡಿ ಠಾಣೆ, ಪುತ್ತೂರು ಗ್ರಾಮಾಂತರ ವೃತ್ತ ಕಚೇರಿ, ಡಿ.ಸಿ.ಐ.ಬಿ. ವಿಭಾಗದ ಸಿಬ್ಬಂದಿಯನ್ನೊಳಗೊಂಡ ತನಿಖಾ ತಂಡವು ಪ್ರಕರಣ ದಾಖಲಾದ 48 ಗಂಟೆಯೊಳಗೆ (ಸೆ.16) ಆರೋಪಿ ಮಹಮ್ಮದ್ ಶಾಫಿ ( 28 ) ಯನ್ನು ಬಂಧಿಸಿದೆ. ಈತ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮ ನೇಜಿಕಾರು ಅಂಬೊಟ್ಟು ನಿವಾಸಿ ಎನ್ನಲಾಗಿದೆ.
ಆರೋಪಿಯ ಮನೆ ದಸ್ತಗಿರಿ ಮಾಡಿ ಕಳುವಾಗಿದ್ದ ಒಂದು ಲಕ್ಷ ರೂ. ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಹಮ್ಮದ್ ಶಾಫಿಯ ವಿರುದ್ಧ ಬೆಳ್ತಂಗಡಿ, ಪುತ್ತೂರು ನಗರ, ವಿಟ್ಲ, ಕಾರ್ಕಳ ಗ್ರಾಮಾಂತರ, ಉಡುಪಿ ನಗರ, ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಒಟ್ಟು 12 ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದು ಬಂದಿದೆ.