ಬೆಳ್ತಂಗಡಿ: ಕಳೆದ ಕೆಲವು ದಿನಗಳ ಹಿಂದೆ ನಾರಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕುಜೆ ಅಲಂಬ ರಸ್ತೆಯ ಸುಮಾರು 45 ವರ್ಷಗಳ ಹಳೆಯ ಸೇತುವೆ ಕುಸಿದು ಬಿದ್ದು, ಸಂಪರ್ಕ ಕಡಿತಗೊಂಡಿತ್ತು. ಪರಿಣಾಮ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಅದಲ್ಲದೇ ಮಳೆಗಾಲ ಪ್ರಾರಂಭವಾಗಿದ್ದರಿಂದ ಸೇತುವೆ ಅವಲಂಬಿಸಿದ್ದ ಸುಮಾರು 168 ಮನೆಯವರು ಕಂಗಾಲಾಗಿದ್ದರು. ಸೇತುವೆ ಕುಸಿತದ ಬಗ್ಗೆ ಶಾಸಕ ಹರೀಶ್ ಪೂಂಜರಿಗೆ ಸ್ಥಳೀಯರು ತಿಳಿಸಿದಾಗ ತಕ್ಷಣ ಕುಕ್ಕುಜೆ ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುತ್ತಿಗೆದಾರರಾದ ಮುಗ್ರೋಡಿ ಕನ್ಸ್ಟ್ರಕ್ಷನ್ ಅವರಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣದ ಬಗ್ಗೆ ಚರ್ಚಿಸಿ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಒಂದು ವಾರದೊಳಗೆ ಸೇತುವೆ ನಿರ್ಮಿಸಿಕೊಟ್ಟು ಆ ಪರಿಸರದ ಜನರ ಸಂಕಷ್ಟ ದೂರ ಮಾಡಿದ್ದಾರೆ.
ವಾರದೊಳಗೆ ತಾತ್ಕಾಲಿಕ ಸೇತುವೆ ನಿರ್ಮಿಸಿ ಕೊಟ್ಟ ಶಾಸಕ ನಮ್ಮ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ ಭೇಟಿ ನೀಡಿದ ಶಾಸಕರು ಗುತ್ತಿಗೆದಾರರನ್ನು ಕರೆಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಕೆಲಸ ಪ್ರಾರಂಭಿಸಲು ಸೂಚಿಸಿದ್ದರು.
168 ಮನೆಯವರಿಗೆ ಈ ಸೇತುವೆಯೇ ಅವಲಂಬಿತವಾಗಿತ್ತು. ಶಾಸಕರಿಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಯುತ್ತಿಲ್ಲ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಸೇತುವೆ ಕುಸಿತದ ದಿನವೇ ರಾತ್ರಿ ಬೆಂಗಳೂರಿನಲ್ಲಿದ್ದ ಶಾಸಕರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಮರುದಿನ ಸಂಜೆ ಕುಕ್ಕುಜೆ ಸೇತುವೆ ಕುಸಿದ ಸ್ಥಳಕ್ಕೆ ಬಂದ್ದು ತಕ್ಷಣ ಸ್ಪಂದಿಸಿದ ಪರಿಣಾಮ ಒಂದು ವಾರದೊಳಗೆ ಸೇತುವೆ ನಿರ್ಮಾಣವಾಗಿದೆ. ಮಳೆಗಾಲದ ಈ ಸಮಯದಲ್ಲಿ ಶಾಸಕರು ಸೇತುವೆ ನಿರ್ಮಿಸಿ ಕೊಟ್ಟು ಈ ಪರಿಸರದ ಜನತೆಯ ಆಧಾರವಾಗಿದ್ದ ಈ ಸೇತುವೆ ನಿರ್ಮಿಸಿದ್ದಾರೆ. ಶಾಸಕರಿಗೆ ಈ ಪರಿಸರದ ಎಲ್ಲರೂ ಋಣಿಗಳಾಗಿದ್ದೇವೆ ಎಂದು ಸ್ಥಳೀಯ ನಿವಾಸಿ ರಾಮಚಂದ್ರ ಭಟ್ ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.