ಮಂಗಳೂರು:ಕರ್ನಾಟಕ ರಾಜ್ಯ ಸರ್ಕಾರವು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದು ಉತ್ತಮ ಕಾರ್ಯವನ್ನು ಮಾಡಿದ್ದು, ಇದು ಸ್ವಾಗತಾರ್ಹ ಎಂದು ಕದ್ರಿ ಜೋಗಿ ಮಠದ ಶ್ರೀ ನಿರ್ಮಲನಾಥಜೀ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದು ಸ್ವಾಗತಾರ್ಹ: ಶ್ರೀ ನಿರ್ಮಲನಾಥಜೀ ಕದ್ರಿ ಜೋಗಿ ಮಠದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಗೋಹತ್ಯೆ ಎಂದರೆ ಇದು ಮಾತೃಹತ್ಯೆ ಮಾಡಿದಂತೆ. ಆದ್ದರಿಂದ ತಾಯಿಗೆ ಹೊಡೆದು ಹತ್ಯೆ ಮಾಡಿದಷ್ಟೇ ಪಾಪವು ಗೋಹತ್ಯೆ ಮಾಡಿದವನಿಗೂ ತಟ್ಟುತ್ತದೆ. ಆದ್ದರಿಂದ ಯಾವನು ಗೋವನ್ನು ರಕ್ಷಣೆ ಮಾಡುತ್ತಾನೋ ಅವನು ಶ್ರೇಷ್ಠನಾಗುತ್ತಾನೆ ಎಂದು ಅಭಿಪ್ರಾಯಿಸಿದರು.
ಗೋವು ಕೇವಲ ಪಶುವಲ್ಲ, ಇದರಲ್ಲಿ ಎಲ್ಲಾ ದೇವತೆಗಳ ಸಾನಿಧ್ಯವಿದೆ. ಗೋವಿನ ಮಹತ್ವ ಬಹಳ ಹಿರಿಯದು. ರಾಜ್ಯ ಸರ್ಕಾರ ಗೋಹತ್ಯೆಯನ್ನು ಸ್ಥಗಿತಗೊಳಿಸಿ ಬಹಳ ಉತ್ತಮ ಕಾರ್ಯ ಮಾಡಿದೆ ಎಂದು ಶ್ರೀ ನಿರ್ಮಲನಾಥಜೀ ಮಹಾರಾಜ್ ಹೇಳಿದರು.
ನಾಥ ಸಂಪ್ರದಾಯದಲ್ಲಿ ದೇಶಕ್ಕೆ ಹೆಸರಾಗಿರುವ ಕದ್ರಿಯಲ್ಲಿರುವ ಜೋಗಿ ಮಠದ ಶ್ರೀಕಾಲಭೈರವ ದೇವಸ್ಥಾನ ಸುಮಾರು 200 ವರ್ಷಗಳ ಇತಿಹಾಸವನ್ನು ಹೊಂದಿರುವ ದೇವಸ್ಥಾನ. ಸದ್ಯ ಕಾಲಭೈರವ ದೇವಸ್ಥಾನವನ್ನು ನವೀಕರಿಸಲು ನಿರ್ಧರಿಸಲಾಗಿದ್ದು, ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣವಾಗಲಿದೆ ಎಂದು ಸ್ವಾಮೀಜಿ ಹೇಳಿದರು.
ಈಗಾಗಲೇ ಶ್ರೀಕಾಲಭೈರವ ದೇವಸ್ಥಾನದ ಸ್ಥಾವರಗಳ ನಿರ್ಮಾಣದ ರೂಪರೇಷೆಗಳನ್ನು ಸಿದ್ಧಪಡಿಸಿ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಆದ್ದರಿಂದ ದಾನಿಗಳ ನೆರವಿನೊಂದಿಗೆ ಈ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.