ಕರ್ನಾಟಕ

karnataka

ETV Bharat / state

ತನ್ನ ಗೂಡಂಗಡಿಗೆ ತಾನೇ ಬೆಂಕಿ ಇಟ್ಟ ಅಂಗಡಿ ಮಾಲೀಕ ; ಅಚ್ಚರಿ ತಂದ ಮುಂಗೋಪಿಯ ವರ್ತನೆ - fire from shop owner

ಬೆಂಕಿ ಹಾಕುತ್ತಿದ್ದ ದೃಶ್ಯ ಕಂಡ ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಲು ಅಂಗಡಿಯತ್ತ ಧಾವಿಸಿದ್ದರು. ಆ ವೇಳೆ ಬೆಂಕಿ ನಂದಿಸದಂತೆ ಮಾಲೀಕ ಮಹಮ್ಮದ್‌ ತಡೆದಿದ್ದಾರೆ. ನನ್ನ ಅಂಗಡಿ ನಾನು ಏನು ಬೇಕಾದ್ರೂ ಮಾಡುತ್ತೇನೆ, ಬೆಂಕಿ ಹಚ್ಚಿದ್ದೇನೆ, ಸುಟ್ಟು ಭಸ್ಮವಾಗಲಿ ನಿಮಗೇನು? ಎಂದು ಹೇಳಿ ನೇರ ಮನೆ ಕಡೆ ತೆರಳಿದ್ದಾರೆ..

The shop owner who set fire to his shop
ಬೆಂಕಿ ನಂದಿಸುತ್ತಿರುವ ಸ್ಥಳೀಯರು

By

Published : Sep 7, 2020, 7:44 PM IST

Updated : Sep 7, 2020, 8:16 PM IST

ಪುತ್ತೂರು :ತಾನು ವ್ಯಾಪಾರ ಮಾಡುತ್ತಿದ್ದ ಅಂಗಡಿಗೆ ಅದರ ಮಾಲೀಕನೇ ಬೆಂಕಿ ಹಚ್ಚಿ ಅಂಗಡಿಯೊಳಗಿನ ಸಾಮಗ್ರಿಗಳನ್ನು ಸುಟ್ಟು ಭಸ್ಮ ಮಾಡಿದ ವಿಚಿತ್ರ ಘಟನೆ ಇಲ್ಲಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪಂಚೋಡಿ ಮಾವಿನಕಟ್ಟೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಮಾವಿನಕಟ್ಟೆ ನಿವಾಸಿ ಮಹಮ್ಮದ್ ತನ್ನ ಅಂಗಡಿಗೆ ಬೆಂಕಿ ಹಚ್ಚಿದವರು. ಕಳೆದ ನಾಲ್ಕು ವರ್ಷಗಳಿಂದ ಇದೇ ಗೂಡಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಇವರು ಲಾಕ್​ಡೌನ್ ಬಳಿಕ ಅಂಗಡಿ ತೆರದಿದ್ದರು. ಸ್ಟೇಶನರಿ ಸಾಮಗ್ರಿ ಮತ್ತು ಚಹಾ ಹೊಂದಿರುವ ಸಣ್ಣ ಕ್ಯಾಂಟೀನ್ ಕೂಡ ಇದರೊಳಗಿತ್ತು. ಇಂದು ಬೆಳಗ್ಗೆ ಎಂದಿನಂತೆ ಮಹಮ್ಮದ್, ಅಂಗಡಿ ಬಾಗಿಲು ತೆರೆದಿದ್ದರು. ಮಧ್ಯಾಹ್ನ ಆಗುತ್ತಲೇ ಅಂಗಡಿಯೊಳಗಿನಿಂದ ಹೊರಗೆ ಬಂದು ಏಕಾಏಕಿ ತನ್ನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಬೆಂಕಿ ನಂದಿಸುತ್ತಿರುವ ಸ್ಥಳೀಯರು

ಬೆಂಕಿ ಹಾಕುತ್ತಿದ್ದ ದೃಶ್ಯ ಕಂಡ ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಲು ಅಂಗಡಿಯತ್ತ ಧಾವಿಸಿದ್ದರು. ಆ ವೇಳೆ ಬೆಂಕಿ ನಂದಿಸದಂತೆ ಮಾಲೀಕ ಮಹಮ್ಮದ್‌ ತಡೆದಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನನ್ನ ಅಂಗಡಿ ನಾನು ಏನು ಬೇಕಾದ್ರೂ ಮಾಡುತ್ತೇನೆ, ಬೆಂಕಿ ಹಚ್ಚಿದ್ದೇನೆ, ಸುಟ್ಟು ಭಸ್ಮವಾಗಲಿ ನಿಮಗೇನು? ಎಂದು ಹೇಳಿ ತಡೆದು ಅಂಗಡಿ ಹೊತ್ತಿ ಉರಿಯುತ್ತಿದ್ದಂತೆ ನೇರ ಮನೆ ಕಡೆ ತೆರಳಿದ್ದಾರೆ.

ಆದರೆ, ಸ್ಥಳೀಯರು ಮಹಮ್ಮದ್ ಮನೆಗೆ ತೆರಳಿದ ಬಳಿಕ ಅಂಗಡಿಯೊಳಗಿನ ಬೆಂಕಿ ನಂದಿಸಿರುವುದಾಗಿ ತಿಳಿದು ಬಂದಿದೆ. ಈ ವೇಳೆಗೆ ಸ್ಥಳೀಯರು ಪೊಲೀಸರಿಗೂ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣಾ ಎಎಸ್​ಐ ತಿಮ್ಮಯ್ಯಗೌಡ, ಈಶ್ವರಮಂಗಲ ಹೊರಠಾಣಾ ಪೊಲೀಸ್ ಸಿಬ್ಬಂದಿ ಬಸವರಾಜ್, ಪ್ರಶಾಂತ್ ಮತ್ತಿತರರು ಆಗಮಿಸಿ ಬೆಂಕಿ ನಂದಿಸಲು ಸಹಕಾರ ನೀಡಿದರು.

ಅವಘಡದಿಂದ ಅಂಗಡಿಯೊಳಗಿದ್ದ ಸುಮಾರು ₹15ಸಾವಿರಕ್ಕೂ ಮಿಕ್ಕ ಸ್ಟೇಶನರಿ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಅಂಗಡಿಯೊಳಗೆ ಚಹಾ ಮಾಡಲು ಇಟ್ಟಿದ್ದ ಸ್ಟೌವ್​ನ ಸಣ್ಣ ಗಾತ್ರದ ಸಿಲಿಂಡರ್ ಬೆಂಕಿಗೆ ಆಹುತಿಯಾಗಿ ಸ್ಫೋಟಗೊಂಡಿದ್ದರೂ ಯಾವುದೇ ಹೆಚ್ಚಿನ ಅನಾಹುತ ಉಂಟಾಗಿಲ್ಲ. ಅಂಗಡಿಯ ಮಾಡು ಹೊರತುಪಡಿಸಿ ಉಳಿದೆಲ್ಲವೂ ಬೆಂಕಿಗೆ ಆಹುತಿಯಾಗಿದೆ.

ಮಹಮ್ಮದ್‌ ತನ್ನ ಅಂಗಡಿಗೆ ಬೆಂಕಿ ಕೊಡುವ ಐದು ನಿಮಿಷ ಮೊದಲು ಬಾಲಕನೊಬ್ಬ ಸಾಬೂನಿಗೆಂದು ಅಂಗಡಿಗೆ ಬಂದಿದ್ದ. ಅಂಗಡಿಯಲ್ಲಿ ಸಾಬೂನು ಇದ್ದರೂ ಬಾಲಕನಲ್ಲಿ ’ನಿನಗೆ ಈಗ ಸಾಬೂನು ಬೇಡ, ಮತ್ತೆ ನೋಡುವ’ ಎಂದು ಹೇಳಿ ಬಾಲಕನನ್ನು ವಾಪಸ್ ಕಳಿಸಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ. ಬಾಲಕ ಅಂಗಡಿಯಿಂದ ಮೀಟರ್ ದೂರ ತೆರಳಿದಾಗ ಅಂಗಡಿಯೊಳಗಿನಿಂದ ಬಂದ ಮಹಮ್ಮದ್‌ ತನ್ನ ಅಂಗಡಿಗೆ ಬೆಂಕಿ ಹಚ್ಚಿದ್ದರು.

ತನ್ನ ಗೂಡಂಗಡಿಗೆ ತಾನೇ ಬೆಂಕಿ ಇಟ್ಟ ಅಂಗಡಿ ಮಾಲೀಕ

ಈ ದೃಶ್ಯವನ್ನು ಸ್ಥಳೀಯರು ಕಣ್ಣಾರೆ ಕಂಡಿದ್ದಾರೆ. ತನ್ನ ಬದುಕಿನ ಆಧಾರವಾಗಿದ್ದ ಗೂಡಂಗಡಿಗೆ ಮಹಮ್ಮದ್‌ ಯಾಕೆ ಬೆಂಕಿ ಹಚ್ಚಿದರು ಎಂಬುವುದು ಯಾರಿಗೂ ಗೊತ್ತಿಲ್ಲ. ಎಲ್ಲರೊಡನೆ ಉತ್ತಮ ಒಡನಾಟದಲ್ಲಿರುವ ಇವರು ಈ ಹಿಂದೆ ಒಣ ಮೀನು ಲೈನ್ ಸೇಲ್ ವಾಪಾರ ಮಾಡುತ್ತಿದ್ದರು. ಬಳಿಕ ಲೈನ್ ಸೇಲ್ ವ್ಯವಹಾರ ಬಿಟ್ಟು ಮನೆ ಸಮೀಪವೇ ಗೂಡಂಗಡಿ ವ್ಯಾಪಾರ ಮಾಡುತ್ತಿದ್ದರು.

ಇವರಿಗೆ ಉತ್ತಮ ವ್ಯಾಪಾರವೂ ಆಗುತಿತ್ತು. ಮುಂಗೋಪಿಯಾಗಿದ್ದ ಮಹಮ್ಮದ್‌ ಏಕಾಏಕಿ ತನ್ನ ಅಂಗಡಿಗೆ ಬೆಂಕಿ ಹಚ್ಚಲು ಕಾರಣ ಏನೆಂದು ತಿಳಿಯಲು ಪೊಲೀಸರು ಆತನನ್ನ ವಿಚಾರಣೆ ನಡೆಸುತ್ತಿದ್ದಾರೆ. ಈಶ್ವರಮಂಗಲ ಹಿಂಜಾವೇ ನಿಕಟಪೂರ್ವ ಅಧ್ಯಕ್ಷ ರಾಜೇಶ್ ನಾಯರ್ ಬಂಟಕಲ್ಲು ಸೇರಿ ಸ್ಥಳೀಯರು ಬೆಂಕಿ ಶಮನಗೊಳಿಸುವಲ್ಲಿ ಕಾರ್ಯಪ್ರವೃತರಾದರು.

Last Updated : Sep 7, 2020, 8:16 PM IST

ABOUT THE AUTHOR

...view details