ಸುಳ್ಯ :ಕರಾವಳಿಯಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಡೆಂಘೀ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳೂ ಹೆಚ್ಚಾಗುತ್ತಿವೆ. ಆದರೆ, ಸುಳ್ಯನಗರ ಪಂಚಾಯತ್ ಮಾತ್ರ ಕಸ ವಿಲೇವಾರಿ ಮಾಡಲು ಮಾಡುವ ಅಸಡ್ಡೆ ಇದೀಗ ರಾಜ್ಯ ಮಟ್ಟದಲ್ಲೂ ಸುದ್ದಿಯಾಗುತ್ತಿದೆ.
ಸುಳ್ಯದಲ್ಲಿ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಸುಳ್ಯ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್. ಅಂಗಾರ ಅವರ ನೇತೃತ್ವದಲ್ಲಿ ತುರ್ತು ಸಭೆ ಕರೆದು ನಗರದ ಕಸ ವಿಲೇವಾರಿ ಕೂಡಲೇ ಆಗಬೇಕು ಎಂದು ತಾಕೀತು ಮಾಡಲಾಗಿತ್ತು. ಮಾತ್ರವಲ್ಲದೇ ಸುಳ್ಯ ನ್ಯಾಯಾಧೀಶರಾದ ಸೋಮಶೇಖರ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಥಳಕ್ಕೆ ಭೇಟಿ ನೀಡಿ ಕಸ ವಿಲೇವಾರಿ ಮಾಡುವಂತೆ ನಗರ ಪಂಚಾಯತ್‌ಗೆ ಸೂಚನೆ ನೀಡಿದ್ದರು.
ಆದರೆ,ಈಗಲೂ ಕಸ ಮಾತ್ರ ಲೋಡುಗಟ್ಟಲೆ ರಾಶಿ ಬಿದ್ದು, ಪ್ರದೇಶದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಇದೀಗ ಸುಳ್ಯದ ಕಸ ಸಮಸ್ಯೆ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪ್ರಖ್ಯಾತ ನಟ, ಗಾಯಕ ಹಾಗೂ ನಿರ್ದೇಶಕರಾದ ಅನಿರುದ್ದ್ ಅವರು ಸುಳ್ಯದ ನಗರ ಪಂಚಾಯತ್ ಕಸವನ್ನು ತೆರವು ಮಾಡಲು ಮುತುವರ್ಜಿವಹಿಸುವಂತೆ ವಿನಂತಿಸಿದ್ದಾರೆ.