ಕರ್ನಾಟಕ

karnataka

ETV Bharat / state

ಪ್ರಧಾನಿ, ಗೃಹಸಚಿವರೇ ಮಾಸ್ಕ್ ಧರಿಸೋದಿಲ್ಲ, ಸಾಮಾನ್ಯರಿಗೆ ಮಾತ್ರ ಕೇಸ್ : ರಮಾನಾಥ ರೈ ಲೇವಡಿ - Home Minister Not Wearing the Mask

ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೈಜ್ಞಾನಿಕ ಕ್ರಮ ಅನುಸರಿಸುತ್ತಿಲ್ಲ. ಬಾಯಿ ಮಾತಿನ ಉಪಚಾರದಿಂದ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ. ಬೆಂಗಳೂರು ಹೊರತುಪಡಿಸಿ ಪ್ರಮುಖ ನಗರವಾಗಿರುವ ಮಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಗಮನ ಹರಿಸಬೇಕು. ಅಲ್ಲದೆ ಹೆಚ್ಚುವರಿ ಕ್ರಮಕ್ಕೆ ಸರ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು..

ರಮಾನಾಥ ರೈ
ರಮಾನಾಥ ರೈ

By

Published : Apr 19, 2021, 7:08 PM IST

ಮಂಗಳೂರು :ದೇಶದ ಪ್ರಧಾನಮಂತ್ರಿ, ಗೃಹಸಚಿವರೇ ಮಾಸ್ಕ್ ಧರಿಸದೆ ಓಡಾಡುತ್ತಾರೆ. ಆದರೆ, ಜನ ಸಾಮಾನ್ಯರು ಮಾಸ್ಕ್ ಧರಿಸದಿದ್ದಲ್ಲಿ ಕೇಸ್ ಹಾಕಲಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಲೇವಡಿ‌ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳುವುದಕ್ಕೆ ನನ್ನ ಸಹಮತವೂ ಇದೆ. ಆದರೆ, ಅದರಿಂದ ನಾಗರಿಕರಿಗೆ ತೊಂದರೆಯಾಗಬಾರದು.

ಅಧಿಕಾರದಲ್ಲಿದ್ದವರು ಇದನ್ನು ಜವಾಬ್ದಾರಿ ವಹಿಸಿ ನಿಭಾಯಿಸಬೇಕು. ಆದ್ದರಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಶೇಷ ಗಮನಹರಿಸಬೇಕು. ಅದಕ್ಕಾಗಿ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ

ಕೋವಿಡ್ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮವಿಲ್ಲ :ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ವೈಜ್ಞಾನಿಕ ಕ್ರಮ ಅನುಸರಿಸುತ್ತಿಲ್ಲ. ಬಾಯಿ ಮಾತಿನ ಉಪಚಾರದಿಂದ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ. ಬೆಂಗಳೂರು ಹೊರತುಪಡಿಸಿ ಪ್ರಮುಖ ನಗರವಾಗಿರುವ ಮಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ವಿಶೇಷ ಗಮನ ಹರಿಸಬೇಕು. ಅಲ್ಲದೆ ಹೆಚ್ಚುವರಿ ಕ್ರಮಕ್ಕೆ ಸರ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಸರ್ಕಾರದ ಧೋರಣೆಯ ಬಗ್ಗೆ ಸ್ಪಷ್ಟತೆಯಿಲ್ಲ :ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರು, ಅಧಿಕಾರಿಗಳಿಗೆ ಎಚ್ಚರಿಸುವಂತಹ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಹೇಳಿಕೆ ಹಾಗೂ ಜನಪ್ರತಿನಿಧಿಗಳ ಹೇಳಿಕೆಗಳಿಗೆ ಸಮನ್ವಯತೆ ಇಲ್ಲ. ಇದರಿಂದ ಸರ್ಕಾರದ ಧೋರಣೆಯ ಬಗ್ಗೆ ಸ್ಪಷ್ಟತೆ ಮೂಡುತ್ತಿಲ್ಲ.

ಜನರ ಮಧ್ಯೆ ಗೊಂದಲ ಮೂಡಲು ಕಾರಣವಾಗಿದೆ. ವಾಹನ ತಪಾಸಣೆ ಮಾಡುವ ನೆಪದಲ್ಲಿ ಗಂಟೆಗಟ್ಟಲೆ ರಸ್ತೆ ಬ್ಲಾಕ್ ಮಾಡಲಾಗುತ್ತಿದೆ. ಕಟ್ಟುನಿಟ್ಟಿನ ಕ್ರಮಕ್ಕೆ ನನ್ನ ಸಹಮತ ಇದೆ. ಆದರೆ, ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗಬಾರದು. ರಾತ್ರಿ ಕರ್ಫ್ಯೂ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲಗಳಿವೆ ಎಂದು ರಮಾನಾಥ ರೈ ಹೇಳಿದರು.

ಮೋದಿಯವರು ಮನಮೋಹನ್ ಸಿಂಗ್ ನೋಡಿ ಕಲಿಯಲಿ :ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಮನಮೋಹನ್ ಸಿಂಗ್ ಅವರ ನೇತೃತ್ವದ ಕೇಂದ್ರ ಸರ್ಕಾರದ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ನಿಜವಾಗಿಯೂ ಪರಿಹಾರ ದೊರಕಿತ್ತು. ದೇಶದ ಪ್ರಧಾನಿ ಹೇಗಿರಬೇಕೆಂದು ಮೋದಿಯವರು ಮನಮೋಹನ್ ಸಿಂಗ್ ಅವರಿಂದ ಕಲಿಯಬೇಕು.

ಮನಮೋಹನ್ ಸಿಂಗ್ ಕಾಲದಲ್ಲಿ ಸಾಕಷ್ಟು ಉಪಚುನಾವಣೆಗಳು ನಡೆದಿದ್ದರೂ, ಅವರು ಯಾವುದೇ ಪ್ರಚಾರಕ್ಕೆ ತೆರಳಿರಲಿಲ್ಲ‌. ಆದರೆ, ಇಂದಿನ ಪ್ರಧಾನಿಗೆ ಕೊರೊನಾ ಸಮಸ್ಯೆ ಮುಖ್ಯವಲ್ಲ ಚುನಾವಣಾ ಪ್ರಚಾರ ಮುಖ್ಯವಾಗಿದೆ ಎಂದರು.

ಸಿ ಟಿ ರವಿ ಮಾತಿಗೆ ಪ್ರಾಮುಖ್ಯತೆ ನೀಡೋದಿಲ್ಲ :ನಾಯಕರೆಂದರೆ ಮೋದಿ, ಯಡಿಯೂರಪ್ಪರೇ ಹೊರತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜೀವ್ ಗಾಂಧಿಯಲ್ಲ ಎಂದು ಸಿ ಟಿ ರವಿ ಹೇಳಿದ್ದಾರೆ. ಆದರೆ, ಅವರ ನಾಯಕನೆಂದು ಹೇಳುವ ಯಡಿಯೂರಪ್ಪನವರು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು.

ದೇಶದ ಪ್ರಧಾನಿಯವರು ಸುಳ್ಳು ಮಾತನಾಡುವವರು. ಯಾವುದೋ ಪ್ರಚೋದನೆ ಮಾಡಿ ರಾಜಕೀಯ ಸ್ಥಾನಮಾನಕ್ಕೆ ಇವರೆಲ್ಲ ಬಂದಿದ್ದು, ಜನಸೇವೆ ಮಾಡಿ ಸ್ಥಾನಮಾನಕ್ಕೆ ಬಂದವರಲ್ಲ. ಆದ್ದರಿಂದ ಕುಲಗೋತ್ರವಿಲ್ಲದ ಸಿ ಟಿ ರವಿಯವರ ಮಾತಿಗೆ ನಾವು ಪ್ರಾಮುಖ್ಯತೆ ನೀಡೋಲ್ಲ ಎಂದು ಹರಿಹಾಯ್ದರು.

ಬಿಜೆಪಿ ಪಕ್ಷದೊಳಗೆ ಹೆಗ್ಗಣ ಸತ್ತು ನಾರುತ್ತಿದೆ :ದ.ಕ.ಜಿಲ್ಲೆಯ ಮುಖಂಡರೋರ್ವರು ಕಾಂಗ್ರೆಸ್ ಮುಳುಗು ಹಡಗು. ನಮ್ಮಲ್ಲಿ ಜಗಳವಿದೆ. ಆದರೆ, ಕಾಂಗ್ರೆಸ್​ನಲ್ಲಿ ಬೆಂಕಿ ಬಿದ್ದಿದೆ ಎಂದು ಹೇಳುತ್ತಾರೆ. ನಮ್ಮ ಪಕ್ಷದ ಬಗ್ಗೆ ಅವರು ಚಿಂತಿಸುವ ಅಗತ್ಯವಿಲ್ಲ. ಬಿಜೆಪಿ ಪಕ್ಷದೊಳಗೆ ಹೆಗ್ಗಣ ಸತ್ತು ನಾರುತ್ತಿದೆ ಎಂದು ರಮಾನಾಥ ರೈ ಕಿಡಿಕಾರಿದರು.

ಬಿಜೆಪಿಯವರದ್ದು‌ ವಚನಭ್ರಷ್ಟ ಸರ್ಕಾರ :ಕಾಂಗ್ರೆಸ್ ಕೇಂದ್ರದಲ್ಲಿಯೂ, ರಾಜ್ಯದಲ್ಲಿಯೂ ನುಡಿದಂತೆ ನಡೆದ ಪಕ್ಷ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ 99 ಪ್ರತಿಶತ ಎಲ್ಲವನ್ನೂ ಅನುಷ್ಠಾನಕ್ಕೆ ತಂದಿದೆ. ಬಿಜೆಪಿಯವರದ್ದು‌ ವಚನಭ್ರಷ್ಟ ಸರ್ಕಾರ. ರಾಜ್ಯ ಸರ್ಕಾರಕ್ಕೆ ಸಾರಿಗೆ ನೌಕರರ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಾಗಿಲ್ಲ.

ಪ್ರಕೃತಿ ವಿಕೋಪ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರವೂ ಕಪ್ಪು ಹಣ ತರುತ್ತೇವೆ ಎಂದು ಈವರೆಗೆ ತಂದಿಲ್ಲ. ಎರಡು ಕೋಟಿ ಜನರಿಗೆ ವರ್ಷಕ್ಕೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರು. ಆದರೆ, ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಕಿಡಿಕಾರಿದರು.

ABOUT THE AUTHOR

...view details