ವೈಟ್ ಡೌಸ್ ಸಂಸ್ಥೆಯ ಕೊರಿನಾ ರಸ್ಕಿನಾ ಮಾತನಾಡಿದರು. ಮಂಗಳೂರು:ಖಿನ್ನತೆಯಿಂದ ಬಳಲುತ್ತಿದ್ದ ಕೇರಳದ ಯುವಕನೋರ್ವ ನಾಪತ್ತೆಯಾಗಿದ್ದ. ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ. ಈ ಯುವಕನನ್ನು ಗಮನಿಸಿದ ವೈಟ್ ಡೌಸ್ ಸಂಸ್ಥೆಯು, ಆತನಿಗೆ ಸರಿಯಾದ ಚಿಕಿತ್ಸೆ ನೀಡಿತು. ಪರಿಣಾಮ ಯುವಕ ಸಂಪೂರ್ಣವಾಗಿ ಗುಣಮುಖನಾಗಿ ಮರಳಿ ಕುಟುಂಬದವರೊಂದಿಗೆ ಸೇರಿದ್ದಾನೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಚಂಗನಶ್ಶೇರಿಯ ತ್ರಿಕೋಡಿನಂನ ಮೇಘರಾಜ್ ಎಂಬಾತನ ಕಥೆಯಿದು. 27 ವರ್ಷದ ಮೇಘರಾಜ್ 2022ರ ನವೆಂಬರ್ನಲ್ಲಿ ಕೇರಳದ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಈತನನ್ನು ಹುಡುಕಾಡಿ ಸಾಕಾಗಿದ್ದ ಮನೆಯವರು ಕೇರಳದ ಕೊಟ್ಟಾಯಂನ ತ್ರಿಕೋಡಿನಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಯುವಕನನ್ನು ವೈಟ್ ಡೌಸ್ ಸಂಸ್ಥೆಯ ಸೆಲ್ನಲ್ಲಿ ಇಟ್ಟು ಚಿಕಿತ್ಸೆ:ಹೀಗೆ ನಾಪತ್ತೆಯಾಗಿದ್ದ ಮೇಘರಾಜ್ ಮಂಗಳೂರಿನಲ್ಲಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ. ಮಂಗಳೂರಿನ ಪಡೀಲ್ನ ಅರಣ್ಯ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ ಈತನನ್ನು ವೈಟ್ ಡೌಸ್ ಸಂಸ್ಥೆಯ ಕೊರಿನಾ ರಸ್ಕಿನಾ ಅವರ ನೇತೃತ್ವದಲ್ಲಿ ಸಂಸ್ಥೆಗೆ ಕರೆ ತಂದು ಉಪಚರಿಸಲಾಯಿತು. ಈತ ಆ ಸಂದರ್ಭದಲ್ಲಿ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಆತನನ್ನು ಕರೆದುಕೊಂಡು ಬರುತ್ತಿದ್ದಾಗಲೇ ಆತ ವಾಹನದ ಕಿಟಕಿಯಿಂದ ಹಾರಲು ಯತ್ನಿಸಿದ್ದ. ಆ ಬಳಿಕ ವೈಟ್ ಡೌಸ್ ಸಂಸ್ಥೆಯ ಕಟ್ಟಡದ ಮೇಲ್ಭಾಗದಿಂದ ಪೈಪ್ ಮೂಲಕ ಕೆಳಗಿಳಿದು ಪರಾರಿಯಾಗಿದ್ದ. ಆ ಬಳಿಕ ಆತನನ್ನು ಕುಂಟಿಕಾನದ ಎಜೆ ಆಸ್ಪತ್ರೆಯ ಬಳಿ ಪತ್ತೆ ಹಚ್ಚಿ ಮತ್ತೆ ಚಿಕಿತ್ಸೆ ನೀಡಲಾಯಿತು. ಆತ ತಪ್ಪಿಸಿಕೊಂಡು ಹೋಗಲು ಅನೇಕ ಬಾರಿ ಪ್ರಯತ್ನಿಸಿದ್ದ. ಆತನನ್ನು ವೈಟ್ ಡೌಸ್ ಸಂಸ್ಥೆಯ ಸೆಲ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗಿತ್ತು.
ಗುಣಮುಖನಾದ ಕೇರಳ ಮೂಲದ ಮೇಘರಾಜ್:ಸರಿಯಾದ ಚಿಕಿತ್ಸೆ ನೀಡಿದ್ದರಿಂದ ಗುಣಮುಖನಾಗಿದ್ದ ಮೇಘರಾಜ್ ತನ್ನ ಊರಿನ ಹೆಸರನ್ನು ಹೇಳಿದ್ದ. ವೈಟ್ ಡೌಸ್ ಸಂಸ್ಥೆ ಸಿಬ್ಬಂದಿ ತ್ರಿಕೋಡಿನಂ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಆತ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದನ್ನು ತಿಳಿಸಿದ್ದರು. ತ್ರಿಕೋಡಿನಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅನ್ಸಾರಿ, ಪೊಲೀಸ್ ಸಿಬ್ಬಂದಿ ಸೆಲ್ವರಾಜ್, ಮೇಘರಾಜ್ನ ಅಣ್ಣ ತಾರನಾಥ್, ಅಣ್ಣನ ಗೆಳೆಯ ಶ್ಯಾಮ್ ಜಿತ್, ಸೋದರ ಸಂಬಂಧಿ ಕಣ್ಣನ್ ಅವರು ಇಂದು ವೈಟ್ ಡೌಸ್ ಸಂಸ್ಥೆಗೆ ಆಗಮಿಸಿ ಮೇಘರಾಜ್ನನ್ನು ಕರೆದುಕೊಂಡು ಹೋಗಿದ್ದಾರೆ. ಮೇಘರಾಜ್ ತನ್ನ ಮನೆಯವರು ಬರುವರೆಂದು ಕಾದಿದ್ದು, ತನ್ನನ್ನು ಕರೆದುಕೊಂಡು ಹೋಗಲು ಅಣ್ಣ ಬಂದಾಗ ಸಂತೋಷಗೊಂಡಿದ್ದಾನೆ. ತನ್ನ ಅಣ್ಣನ ಮೊಬೈಲ್ನಿಂದ ತಾಯಿ ಮತ್ತು ಅತ್ತಿಗೆಯ ಜೊತೆಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿ ಖುಷಿ ಪಟ್ಟಿದ್ದಾನೆ.
ವೈಟ್ ಡೌಸ್ ಸಂಸ್ಥೆಯ ಕೊರಿನಾ ರಸ್ಕಿನಾ ಮಾಹಿತಿ:ಈ ಬಗ್ಗೆ ಮಾತನಾಡಿದ ವೈಟ್ ಡೌಸ್ ಸಂಸ್ಥೆಯ ಕೊರಿನಾ ರಸ್ಕಿನಾ ಅವರು, ''2022ರ ನವೆಂಬರ್ನಲ್ಲಿ ಪಡೀಲ್ನ ಅರಣ್ಯದಲ್ಲಿ ಈತ ಸಿಕ್ಕಿದ್ದ. ಆತನಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಆತ ಪರಾರಿಯು ಆಗಿದ್ದ. ಆ ಬಳಿಕ ಆತನನ್ನು ಪತ್ತೆ ಹಚ್ಚಿ ಗುಣಮುಖ ಮಾಡಿ ಇದೀಗ ಆತನನ್ನು ಅವರ ಮನೆಯವರಿಗೆ ಮುಟ್ಟಿಸುವ ಕೆಲಸ ಮಾಡಿರುವುದು ತೃಪ್ತಿ ತಂದಿದೆ. ಇದು ನಮ್ಮ ಸಂಸ್ಥೆಯಿಂದ ಗುಣಮುಖವಾಗಿ ಮನೆಯವರಿಗೆ ತಲುಪಿಸಿದ 412ನೇ ಪ್ರಕರಣವಾಗಿದೆ ಎಂದು ತಿಳಿಸಿದರು.
ತ್ರಿಕೋಡಿನಂ ಠಾಣೆಯ ಎಸ್ಐ ಅನ್ಸಾರಿ ಹೇಳಿದ್ದೇನು?:ತ್ರಿಕೋಡಿನಂ ಠಾಣೆಯ ಎಸ್ಐ ಅನ್ಸಾರಿ ಮಾತನಾಡಿ, ಮೇಘರಾಜ್ ನಾಪತ್ತೆಯಾಗಿರುವ ಬಗ್ಗೆ ನಮ್ಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಹೋಗಿರಬಹುದಾದ ಜಾಗಗಳ ಸಿಸಿಟಿವಿ ದೃಶ್ಯ ಪರಿಶೀಲಿಸಿದರೂ ಕೂಡ ಆತನ ಬಗ್ಗೆ ಪತ್ತೆಯಾಗಿರಲಿಲ್ಲ. ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾನೆ ಎಂದರು. ಮೇಘರಾಜ್ ಅಣ್ಣ ತಾರನಾಥ್ ಮಾತನಾಡಿ, ಈತನಿಗೆ ಬಾಲ್ಯದಲ್ಲಿ ಪಿಟ್ಸ್ ಕಾಯಿಲೆ ಇತ್ತು. ಆತ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಆತ ಒಂದು ದಿನ ರಾತ್ರಿ ಕೆಲಸ ಮುಗಿಸಿ ಬರುವಾಗ ಯಾವುದನ್ನೋ ನೋಡಿ ಭಯ ಪಟ್ಟಿದ್ದ. ಇದರಿಂದ ಆತ ಖಿನ್ನತೆಗೊಳಗಾಗಿದ್ದ. ಆ ಬಳಿಕ ನಾಪತ್ತೆಯಾಗಿದ್ದಾನೆ. ಇದೀಗ ಆತ ಸಿಕ್ಕಿರುವುದು ಖುಷಿ ತಂದಿದೆ ಎನ್ನುತ್ತಾರೆ ಅವರು.
ಇದನ್ನೂ ಓದಿ:ಮಕ್ಕಳ ಅನುಕೂಲಕ್ಕೆ ಪಠ್ಯ ಬದಲಾಯಿಸಿದರೆ ತಪ್ಪೇನು?: ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಗೀತಾ ಶಿವರಾಜ್ಕುಮಾರ್