ಮಂಗಳೂರು: ರಾಷ್ಟ್ರದಲ್ಲಿ ಯಾವುದೆಲ್ಲ ಒಳ್ಳೆಯದಾಗುತ್ತದೋ ಅದನ್ನೆಲ್ಲ, ವಿರೋಧಿಸುವುದೇ ಕಾಂಗ್ರೆಸ್ಸಿಗರ ಮಾನಸಿಕತೆ. ಅದರಲ್ಲಿ 'ಅಗ್ನಿಪಥ್' ಯೋಜನೆ ವಿರೋಧಿಸುವುದು ಕೂಡಾ ಒಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಟೀಕಿಸಿದ್ದಾರೆ.
ನಗರದ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ತುರ್ತುಪರಿಸ್ಥಿತಿಯ ಕರಾಳದಿನ 45ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವಕರು ಸೇನೆಗೆ ಸೇರ್ಪಡೆಯಾಗಬೇಕು. ಎಲ್ಲರಿಗೂ ಸೈನಿಕ ಸಂಸ್ಕಾರ, ಶಿಕ್ಷಣ ದೊರೆಯಬೇಕು. ರಾಷ್ಟ್ರಭಕ್ತಿ ಜಾಗೃತಿಯಾಗಬೇಕು ಎಂಬ ನೆಲೆಯಲ್ಲಿ 17ರಿಂದ 23 ವರ್ಷದ ಯುವಕರಿಗೆ 'ಅಗ್ನಿಪಥ್' ಯೋಜನೆ ಜಾರಿಗೊಳಿಸಲಾಗಿದೆ. ಈ 'ಅಗ್ನಿಪಥ್' ಯೋಜನೆಯಡಿ ಸೇನೆ ಸೇರಲು ನಾವು ಕಾಂಗ್ರೆಸ್ನವರ ಮಕ್ಕಳನ್ನು ಕೇಳಿಲ್ಲ. ಸೇನೆಗೆ ಸೇರುವ ಮತ್ತು ದುಡಿಯಲು ಬಯಸುವವರಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಕೊಡುವ ರೀತಿಯಲ್ಲಿ ಈ ಯೋಜನೆಯಿದೆ ಎಂದರು.
ಕಾಂಗ್ರೆಸ್ ಅಧಿಕಾರ ಕೈತಪ್ಪಿದ ಬಳಿಕ ನಿರಂತರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದೆ. ಕಾನೂನು ಕೈಗೆತ್ತಿಕೊಳ್ಳುವ ಎಲ್ಲ ಘಟನೆಗಳಲ್ಲಿ ಸೂತ್ರಧಾರರಂತೆ ವರ್ತಿಸುತ್ತಿದೆ. ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ, ಶಿವಮೊಗ್ಗ, ಹುಬ್ಬಳ್ಳಿ ಗಲಭೆಗಳ ಹಿಂದೆ ಕಾಂಗ್ರೆಸ್ ಇದೆ ಹಾಗೂ ದ್ವೇಷದ ರಾಜಕಾರಣವನ್ನು ಮಾಡುತ್ತಿದೆ ಎಂದು ಆರೋಪಿಸಿದರು.