ಮಂಗಳೂರು:ಜೂ. 8ರಿಂದ ಮುಜರಾಯಿ ಇಲಾಖೆಗಳ ಎಲ್ಲ ದೇವಾಲಯಗಳನ್ನು ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಟೀಲು ಶ್ರೀ ಕ್ಷೇತ್ರದಲ್ಲಿರುವ ದುರ್ಗಾ ಪರಮೇಶ್ವರಿ ದೇವಿಯ ದರ್ಶನ ಸಿಗುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೂ. 8ರಂದು ದೇವಸ್ಥಾನ ತೆರೆದರೆ ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ಇದ್ದು, ಜನ ಸಂದಣಿಯನ್ನು ಹತೋಟಿಗೆ ತರಲು ಅಸಾಧ್ಯ. ಈ ಹಿನ್ನೆಲೆ ಸರ್ಕಾರದ ಆದೇಶ ಇದ್ದರೂ ಸೋಮವಾರದಿಂದ ದೇವಸ್ಥಾನ ತೆರೆಯದಿರಲು ಆಡಳಿತ ಮಂಡಳಿ ನಿರ್ಧರಿಸಿದೆ.
ಸರ್ಕಾರ ಜೂ. 1 ರಿಂದ ದೇವಸ್ಥಾನ ತೆರೆಯಲಾಗುತ್ತದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದರಿಂದ ಶುಕ್ರವಾರ 5 ಸಾವಿರದಷ್ಟು ಭಕ್ತರು ದೇವಾಲಯಕ್ಕೆ ಆಗಮಿಸಿ ಒಳ ಪ್ರವೇಶಿಸಲಾಗದೆ ಹಿಂದಿರುಗಿ ಹೋಗಿದ್ದಾರೆ. ಒಂದು ವೇಳೆ ಜೂ. 8 ರಂದು ಇದೇ ರೀತಿ ಜನದಟ್ಟಣೆ ಉಂಟಾದಲ್ಲಿ ನಿಭಾಯಿಸಲು ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ದೇವಾಲಯದ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.
ದೇವಾಲಯದ ಆಡಳಿತ ಮಂಡಳಿಯ ಪತ್ರಿಕಾ ಪ್ರಕಟನೆ ಭಕ್ತರ ಜನದಟ್ಟಣೆ ನಿಭಾಯಿಸಲು ಯಾವುದೇ ತೊಂದರೆ ಆಗದ ರೀತಿಯಲ್ಲಿ ದೇವಾಲಯದ ವತಿಯಿಂದ ದೇವಿ ದರ್ಶನಕ್ಕೆ ಟಿಕೆಟ್ ಮೂಲಕ ವ್ಯವಸ್ಥೆಗಾಗಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯವೇ ಇದು ದೇವಾಲಯದ ಕೈಸೇರಲಿದೆ. ಆ ಬಳಿಕ ಆನ್ಲೈನ್ನಲ್ಲಿ ದರ್ಶನಕ್ಕೆ ಉಚಿತ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ. ನೂತನ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ ಬಳಿಕ ದೇವಸ್ಥಾನ ತೆರೆಯಲು ಆಡಳಿತ ಮಂಡಳಿ ಚಿಂತನೆ ನಡೆಸಿದೆ. ಇನ್ನು ದೇವಾಲಯ ತೆರೆಯುವ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.