ಕಡಬ( ಮಂಗಳೂರು):ಪ್ರಧಾನಿ ಮೋದಿ, ಆರ್ಎಸ್ಎಸ್ ಹಾಗೂ ಇತರ ಕೆಲವು ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಫೇಸ್‌ಬುಕ್‌ನಲ್ಲಿ ಸಂದೇಶ ರವಾನಿಸಿದ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನಿವೃತ್ತ ಪೊಲೀಸ್ ಚೆನ್ನಪ್ಪ ಗೌಡರ ಪುತ್ರ ಜೆಡಿಎಸ್ನ ಪ್ರಮುಖ ಹರಿಪ್ರಸಾದ್ ಎನ್ಕಾಜೆ ಎಂಬವವರನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಆದರೀಗ ಮುಚ್ಚಳಿಕೆ ಬರೆಸಿಕೊಂಡು ಕೇಸು ಹಿಂದಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮೋದಿ- ಶಾ ವಿರುದ್ಧ ಅವಹೇಳನಕಾರಿ ಸಂದೇಶ: ಆರೋಪಿಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ - latest mangalore news
ಪ್ರಧಾನಿ ಮೋದಿ, ಆರ್.ಎಸ್.ಎಸ್. ಹಾಗೂ ಇತರ ಕೆಲವು ನಾಯಕರ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿದವನನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಆದರೀಗ ಪೋಷಕರನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿ, ಮುಚ್ಚಳಿಕೆ ಬರೆಸಿ ಕೇಸು ಹಿಂದಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ಯುವತಿಯೊಂದಿಗೆ ಇರುವ ಭಾವ ಚಿತ್ರ ಹಾಗೂ ಆರ್ಎಸ್ಎಸ್ ಬಗ್ಗೆ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ್ದರು. ಹರಿಪ್ರಸಾದ್ ಎನ್ಕಾಜೆಯವರು ಈ ಹಿಂದೆಯೂ ಇದೇ ರೀತಿಯ ಸಂದೇಶಗಳನ್ನು ರವಾನಿಸಿದ್ದು, ಈ ಬಗ್ಗೆ ಬಿಜೆಪಿ ಮುಖಂಡ ಪ್ರಕಾಶ್ ಎನ್.ಕೆ ಕಡಬ ಪೊಲೀಸರಿಗೆ ದೂರು ನೀಡಿದ್ದರು.
ಹರಿಪ್ರಸಾದ್ ಎನ್ಕಾಜೆಯ ತಂದೆ ನಿವೃತ್ತ ಪೊಲೀಸ್ ಹಾಗೂ ಪ್ರಾಮಾಣಿಕ ಕುಟುಂಬದವರು. ಆದರೆ, ಹರಿಪ್ರಸಾದ್ ಮನೆಯಲ್ಲಿ ಸರಿಯಾಗಿ ಇರದೇ, ತಂದೆ ತಾಯಿಯನ್ನು ನೋಡಿಕೊಳ್ಳುತ್ತಿರಲಿಲ್ಲ. ವಿಚಾರಣೆ ವೇಳೆ ಈ ವಿಷಯಗಳು ಗೊತ್ತಾದ ಹಿನ್ನೆಲೆಯಲ್ಲಿ, ಬಿಜೆಪಿಯ ಮುಖಂಡರು ಸೇರಿದಂತೆ ಹಲವರು ಹರಿಪ್ರಸಾದ್ ಅವರಿಗೆ ಬುದ್ದಿಮಾತು ಹೇಳಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾದರೆ ನಾವು ಕೇಸು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ. ಒಟ್ಟಿನಲ್ಲಿ ಸಮಾಜದಲ್ಲಿ ಇನ್ನು ಮುಂದೆ ಯಾರಿಗೂ ತೊಂದರೆ ಕೊಡದೇ ಸುಸಂಸ್ಕೃತ ಪ್ರಜೆಯಾಗಿ ಇರಬೇಕು ಎಂಬುದಾಗಿ ತಿಳಿ ಹೇಳಿದರು. ಇದಕ್ಕೆ ಒಪ್ಪಿಕೊಂಡ ಹರಿಪ್ರಸಾದ್ ಕ್ಷಮೆಯಾಚಿಸಿದ್ದು, ಬಳಿಕ ಮುಚ್ಚಳಿಕೆ ಬರೆದು ಕೇಸು ಹಿಂದಕ್ಕೆ ಪಡೆಯಲಾಯಿತು.