ಕರ್ನಾಟಕ

karnataka

ETV Bharat / state

ಗೊಂದಲಕ್ಕೊಳಗಾಗುವ ಸಂದೇಶ ನೀಡಬೇಡಿ: ಸರ್ಕಾರಕ್ಕೆ  ಖಾದರ್​ ಮನವಿ - ವೆನ್ಲಾಕ್ ಆಸ್ಪತ್ರೆ

ಕೊರೊನಾ ಬರೋದನ್ನು ನಿಗ್ರಹಿಸಬೇಕಾ ಅಥವಾ ಊಟಕ್ಕೆ ಆದ್ಯತೆ ನೀಡಬೇಕಾ ಎಂದು ಪ್ರಶ್ನಿಸಬೇಕಾಗಿದೆ. ಕೊರೊನಾ ವೈರಾಣು ಹರಡದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ. ಈ ಸಂದರ್ಭದಲ್ಲಿ ಸೂಪರ್ ಮಾರ್ಕೆಟ್, ದಿನಸಿ ಅಂಗಡಿಗಳಿಗೆ 24 ಗಂಟೆ ಅವಕಾಶ ನೀಡಿದರೆ, ಸಾಮಾಜಿಕ ಅಂತರ ಕಾಪಾಡೋದು ಹೇಗೆ ಎಂದು ಮಾಜಿ ಸಚಿವ ಯು.ಟಿ. ಖಾದರ್​​ ಪ್ರಶ್ನಿಸಿದ್ದಾರೆ.

U. T. Khadr
ಮಾಜಿ ಸಚಿವ ಯು.ಟಿ. ಖಾದರ್​​

By

Published : Mar 26, 2020, 10:23 PM IST

ಮಂಗಳೂರು: ಇಡೀ ರಾಜ್ಯದಲ್ಲಿ 24 ಗಂಟೆಯೂ ದಿನಸಿ ಅಂಗಡಿ, ಸೂಪರ್ ಮಾರ್ಕೆಟ್​​ಗಳು ಕಾರ್ಯಾಚರಿಸಲು ಅವಕಾಶ ಮಾಡಿಕೊಟ್ಟಿರೋದನ್ನು ಸರ್ಕಾರ ಮತ್ತೊಮ್ಮೆ ಪುನಃ ವಿಮರ್ಶೆ ಮಾಡಬೇಕು. ಸರ್ಕಾರ ಯಾವಾಗಲೂ ಜನತೆ ಗೊಂದಲಕ್ಕೊಳಗಾಗುವ ಸಂದೇಶವನ್ನು ನೀಡಬಾರದು ಎಂದು‌ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.

ಸರ್ಕ್ಯೂಟ್ ಹೌಸ್​​ನಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ವೈರಸ್ ಬರೋದನ್ನು ನಿಗ್ರಹಿಸಬೇಕಾ ಅಥವಾ ಊಟಕ್ಕೆ ಆದ್ಯತೆ ನೀಡಬೇಕಾ ಎಂದು ಪ್ರಶ್ನಿಸಬೇಕಾಗಿದೆ. ಕೊರೊನಾ ವೈರಾಣು ಹರಡದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ ಕಾಪಾಡುವುದು ಮುಖ್ಯ. ಈ ಸಂದರ್ಭದಲ್ಲಿ ಸೂಪರ್ ಮಾರ್ಕೆಟ್, ದಿನಸಿ ಅಂಗಡಿಗಳಿಗೆ 24 ಗಂಟೆ ಅವಕಾಶ ನೀಡಿದರೆ, ಸಾಮಾಜಿಕ ಅಂತರ ಕಾಪಾಡೋದು ಹೇಗೆ ಎಂದರು.

ಮಾಜಿ ಸಚಿವ ಯು.ಟಿ. ಖಾದರ್​​

ಜನಜಂಗುಳಿ ಸೇರುತ್ತೆ ಎಂದು ಕರ್ಫ್ಯೂ ಸಡಿಲಿಕೆ ಮಾಡಿರೋದು ಸರಿಯಲ್ಲ. ಇದರಿಂದ ರೋಗ ಉಲ್ಬಣವಾದರೆ ಸರ್ಕಾರ ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ರೀತಿಯಲ್ಲಿ ದಿನಸಿ ಅಂಗಡಿಗಳಿಗೆ 24 ಗಂಟೆ ಅವಕಾಶ ನೀಡುವುದಾದರೆ, ದಿನಗೂಲಿ ಕಾರ್ಮಿಕರನ್ನು ಯಾಕೆ ಮನೆಯಲ್ಲಿ ಕೂರಿಸಿರೋದು. ಅವರಿಗೆ ಕೆಲಸ ನೀಡಬಹುದಲ್ಲಾ. ಆದ್ದರಿಂದ ಸರ್ಕಾರ ಈ ಬಗ್ಗೆ ಪುನರ್ ಪರಾಮರ್ಶೆ ಮಾಡಬೇಕು ಎಂದರು.

ಸರ್ಕಾರ ದೇಶದ 80 ಕೋಟಿ ಜನರಿಗೆ ಆಹಾರ ಕಿಟ್ ನೀಡುತ್ತೇವೆ ಎಂದು ಘೋಷಣೆ ಮಾಡಿದೆ. ಇದು ತಿಂಗಳಿನ ಪಡಿತರ ಸಾಮಗ್ರಿಯ ಬಗ್ಗೆ ಹೇಳಲಾಗುತ್ತಿದೆಯೇ ಅಥವಾ ಬೇರೆಯೇ ಆಹಾರ ಕಿಟ್ ನೀಡಲಾಗುತ್ತಿದೆಯೇ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿ, ಗೊಂದಲವನ್ನು ಪರಿಹರಿಸಲಿ. ಅಲ್ಲದೆ ರಾಜ್ಯ ಸರ್ಕಾರ ತಿಂಗಳ ಪಡಿತರವನ್ನು ಈ ತಿಂಗಳಿನಿಂದ 7 ಕೆಜಿಯಿಂದ 5 ಕೆಜಿಗೆ ಇಳಿಸಿದೆ. ಈ ತಿಂಗಳು ಜಾಸ್ತಿಯೇ ನೀಡಬೇಕಿತ್ತು. ಅಲ್ಲದೇ ಎರಡು ತಿಂಗಳ ಅಕ್ಕಿ ಒಟ್ಟಿಗೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅದೆಲ್ಲವನ್ನೂ ಒಟ್ಟಿಗೆ ನೀಡಲಿ. ಈ ತಿಂಗಳು ಎಪಿಎಲ್ ಕಾರ್ಡ್​ದಾರರಿಗೂ ಉಚಿತ ಅಕ್ಕಿ ನೀಡಬೇಕು. ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಲ್ಲಿ ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೂ ಉಚಿತ ಅಕ್ಕಿ ನೀಡಲಾಗುತ್ತಿದೆ‌. ಅದೇ ರೀತಿ ರಾಜ್ಯ ಸರ್ಕಾರವೂ ಎಪಿಎಲ್, ಬಿಪಿಎಲ್ ಎಂದು ನೋಡದೆ ಪಡಿತರ ಸಾಮಗ್ರಿ ನೀಡಲಿ ಎಂದು ಶಾಸಕ ಖಾದರ್ ಹೇಳಿದರು.

ಎರಡು ತಿಂಗಳ ಪಿಂಚಣಿ ಒಟ್ಟಿಗೆ ನೀಡುವ ಭರವಸೆಯನ್ನು ಸರ್ಕಾರ ನೀಡಿದೆ. ಹಿಂದಿನ ಐದು ತಿಂಗಳ ಪಿಂಚಣಿಯೇ ಬಂದಿಲ್ಲ ಎಂದು ವೃದ್ಧರು, ವಿಕಲಾಂಗರು ಕೂಗುತ್ತಿದ್ದಾರೆ. ಆ ತಿಂಗಳ ಪಿಂಚಣಿ ಬಿಡುಗಡೆ ಮಾಡಲಿ. ಅದರ ಜೊತೆಗೆ ಇವೆರಡೂ ತಿಂಗಳ ಪಿಂಚಣಿಯನ್ನೂ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ, ಮುಖ್ಯಮಂತ್ರಿಯವರಿಗೂ ಒತ್ತಾಯ ಮಾಡುತ್ತೇನೆ. ಅಲ್ಲದೇ ಒಂದು ವಾರದೊಳಗೆ ಬಾಕಿ ಇರುವ ಎಲ್ಲ ಪಿಂಚಣಿಯನ್ನು ಬಿಡುಗಡೆ ಮಾಡಲಿ. ನಮ್ಮ ಎಲ್ಲಾ ಕಾರ್ಯಕರ್ತರು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ ಎಂದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆ ಎಂದು ಘೋಷಣೆ ಮಾಡಲಾಗಿದೆ. ಅಲ್ಲದೇ ಇಲ್ಲಿನ ಬಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಮುಂದಕ್ಕೆ ಈ ಜಿಲ್ಲೆಯ ಅತ್ಯಂತ ಬಡ ರೋಗಿಯೊಬ್ಬ ದಾಖಲಾಗಬೇಕಾದಲ್ಲಿ ಎಲ್ಲಿಗೆ ಹೋಗಬೇಕೆಂದು ಜಿಲ್ಲಾಡಳಿತ ಸ್ಪಷ್ಟನೆ ನೀಡಲಿ. ಆದ್ದರಿಂದ ತುರ್ತುಪರಿಸ್ಥಿತಿಯಲ್ಲಿ ಬಡರೋಗಿಗಳು ವೆನ್ಲಾಕ್ ಹೊರತುಪಡಿಸಿ ಯಾವ ಆಸ್ಪತ್ರೆಗೆ ಹೋಗಬೇಕೆಂದು ಗೊಂದಲದಲ್ಲಿದ್ದಾರೆ‌. ಆದ್ದರಿಂದ ಇದನ್ನು ಸರ್ಕಾರ ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ ಎಂದು ಯು.ಟಿ.ಖಾದರ್ ಹೇಳಿದರು.

ABOUT THE AUTHOR

...view details