ಮಂಗಳೂರು: ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಮಂಗಳೂರಿನ ಪುಟ್ಟ ಬಾಲಕಿಯೊಬ್ಬಳು ವಿನೂತನ ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ.
ಕುಡ್ಲದ ರಸ್ತೆ ಗುಂಡಿ ಮುಚ್ಚಿಸಲು ಗಗನಯಾತ್ರಿಯಾಗಿ ರೋಡಿಗಿಳಿದ ಬಾಲಕಿ! - ಬಾಲಕಿಯಿಂದ ವಿನೂತನ ಪ್ರತಿಭಟನೆ
ಮಂಗಳೂರು ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಮಂಗಳೂರಿನ ಪುಟ್ಟ ಬಾಲಕಿಯೊಬ್ಬಳು ವಿನೂತನ ಪ್ರತಿಭಟನೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಿ ಎಂಬ ಕಳಕಳಿಯಿಂದ ಮಂಗಳೂರಿನ ಖಾಸಗಿ ಶಾಲೆಯ ಆರನೇ ತರಗತಿಯ ಆ್ಯಡ್ಲಿನ್ ಡಿಸಿಲ್ವ ಎಂಬ ವಿದ್ಯಾರ್ಥಿನಿ ಗಗನಯಾತ್ರಿಯಾಗಿ ನಗರದಲ್ಲಿ ಚಂದ್ರನ ಮೇಲೆ ನಡೆದಂತೆ ನಡೆದಿದ್ದು, ಅದನ್ನು ವಿಡಿಯೋ ಮಾಡಿ ಹರಿಬಿಡಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಅಗಿದೆ.
ಚಂದ್ರನ ಮೇಲೆ ಇಳಿದು ಅಲ್ಲಿ ಹೊಂಡ, ಗುಂಡಿಗಳ ನಡುವೆ ಸಾಗುವ ಬಾಹ್ಯಾಕಾಶದ ವಿನೂತನ ಪರಿಕಲ್ಪನೆಯ ಮೂಲಕ ಮಂಗಳೂರಿನ ರಸ್ತೆ,ಗುಂಡಿಯನ್ನು ಪ್ರತಿನಿಧಿಸುವಂತೆ ಚಿತ್ರೀಕರಿಸಲಾಗಿದೆ.ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ರಾತ್ರಿ ಈ ವಿಡಿಯೋ ಮಾಡಲಾಗಿದ್ದು ಚಂದ್ರನಂತೆಯೇ ಮಂಗಳೂರಿನ ರಸ್ತೆಯೂ ಹೊಂಡ, ಗುಂಡಿಗಳಿಂದ ಕೂಡಿದೆ ಎಂಬುದು ಪಾಲಿಕೆಗೆ ಸೂಚ್ಯವಾಗಿ ತಿಳಿಸುವುದೇ ಈ ವಿನೂತನ ಪ್ರತಿಭಟನೆಯ ಉದ್ದೇಶವಾಗಿದೆ. ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ನಗರದ ಎಂಸಿಸಿ ಸಿವಿಕ್ ಗ್ರೂಪ್ ನಿಂದ ಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು.ಆದರೆ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅರ್ಜುನ್ ಮಸ್ಕರೆನ್ಹಸ್ ಮತ್ತು ಅಜೋಯ್ ಡಿಸಿಲ್ವ ಎಂಬುವರು ಈ ವಿಭಿನ್ನ ಪ್ರತಿಭಟನೆಗೆ ಮುಂದಾಗಿದ್ದಾರೆ.