ಬಂಟ್ವಾಳ : ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಲತ್ಯಾಜ್ಯ ನಿರ್ವಹಣೆಯ 16 ಘಟಕಗಳನ್ನು ಪ್ರಾಯೋಗಿಕವಾಗಿ ನಿರ್ಮಿಸುತ್ತಿದ್ದು, ಅವುಗಳಲ್ಲಿ ಈಗಾಗಲೇ ಒಂದು ಘಟಕ ಉದ್ಘಾಟನೆಗೊಂಡರೆ, ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದ ಎರಡನೇ ಘಟಕ ಬಂಟ್ವಾಳ ತಾಲೂಕಿನ ಗೋಳ್ತಮಜಲು ಎಂಬಲ್ಲಿ ಚಾಲನೆ ನೀಡಲಾಯಿತು.
ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಣೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೈರ್ಮಲ್ಯದಡಿ ಸುಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ನಿರ್ಮಿಸಲಾದ ಜಿಲ್ಲೆಯ ಮೊದಲ ಮಲತ್ಯಾಜ್ಯ ನಿರ್ವಹಣಾ ಘಟಕವೆಂಬ ಹೆಗ್ಗಳಿಕೆ ಇದಕ್ಕಿದೆ. ಮಾನವನ ದೈನಂದಿನ ಚಟುವಟಿಕೆಗಳಲ್ಲಿ ಬಳಸುವ ನೀರು, ಬಳಕೆಯ ಬಳಿಕ ದ್ರವತ್ಯಾಜ್ಯವಾಗಿ ಪರಿವರ್ತನೆ ಹೊಂದುವಾಗ ಶೇ. 70ರಷ್ಟು ಬೂದು ನೀರಾಗಿಯೂ, ಶೇ. 20 ಕಪ್ಪು ನೀರಾಗಿಯೂ ಉತ್ಪತಿಯಾಗುತ್ತದೆ. ಬೂದು ನೀರನ್ನು ಮನೆ ಹಂತದಲ್ಲಿ ಅಥವಾ ಸಮುದಾಯ ಮಟ್ಟದಲ್ಲಿ ನಿರ್ವಹಿಸಲು ವಿಧಾನಗಳಿವೆ. (ಕೈತೋಟ, ಬಚ್ಚಲು ಗುಂಡಿ, ಸಮುದಾಯ ಇಂಗು ಗುಂಡಿಇತ್ಯಾದಿ).
ಆದರೆ, ಶೌಚಾಲಯದ ಗುಂಡಿಗಳಲ್ಲಿ ತುಂಬಿರುವ ಕಪ್ಪು ನೀರು ಅಥವಾ ಮಲ ತ್ಯಾಜ್ಯವನ್ನು ಸಕ್ಕಿಂಗ್ ಯಂತ್ರದ ಮೂಲಕ ರವಾನಿಸಿ, ಸರಿಯಾದ ವ್ಯವಸ್ಥೆಗಳಿರದ ಕಾರಣ, ನೀರಿನ ಮೂಲಗಳಿಗೆ ಅಥವಾ ಜನರಹಿತ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಇದರಿಂದ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತಿದ್ದು, ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಎಫ್.ಎಸ್.ಟಿ.ಪಿ. ಮಲತ್ಯಾಜ್ಯ ನಿರ್ವಹಣಾ ಘಟಕ ಕೆಲಸ ಮಾಡುತ್ತದೆ.
'ಮಲ ತ್ಯಾಜ್ಯ ನಿರ್ವಹಣೆ ಎಂದರೆ ಮಲ ತ್ಯಾಜ್ಯದ ವೈಜ್ಞಾನಿಕ ಸಂಗ್ರಹಣೆ - ಸಾಗಾಣಿಕೆ - ಸಂಸ್ಕರಣೆ ಮತ್ತು ಸುರಕ್ಷಿತ ವಿಲೇವಾರಿ ಮತ್ತು ಬಳಕೆಯಾಗಿದೆ. ಈ ಪದ್ದತಿಯಲ್ಲಿ ಶೌಚಾಲಯ ಗುಂಡಿಗಳಲ್ಲಿ ಸಂಗ್ರಹವಾದ ಮಲತ್ಯಾಜ್ಯವನ್ನು ಸಕ್ಕಿಂಗ್ ಯಂತ್ರದ ಮೂಲಕ ಸಾಗಾಣಿಕೆ ಮಾಡಿ ಘಟಕದಲ್ಲಿ ಸಂಸ್ಕರಿಸಲಾಗುತ್ತದೆ. ತ್ಯಾಜ್ಯದ ರೊಚ್ಚು ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ ಮತ್ತು ಸಂಸ್ಕರಣಗೊಂಡ ನೀರು ಶುದ್ದೀಕರಿಸಿ ಗಿಡಗಳಿಗೆ ಹಾಯಿಸಲಾಗುತ್ತದೆ ಮತ್ತು ಹೆಚ್ಚುವರಿ ನೀರನ್ನು ಇಂಗಿಸಲಾಗುತ್ತದೆ ಎಂದು ವಿವರಿಸುತ್ತಾರೆ ದ. ಕ ಜಿ ಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್' ಜಿ ನರೇಂದ್ರಬಾಬು.