ಮಂಗಳೂರು: ಮಹಾರಾಷ್ಟ್ರ ಸರ್ಕಾರ ತನ್ನ ವಿರುದ್ಧ ಮಾತನಾಡುವವರ ವಿರುದ್ಧ ನಡೆದುಕೊಳ್ಳುವ ರೀತಿ ಬಹಳ ದೊಡ್ಡ ಆಘಾತವನ್ನು ನೀಡುತ್ತಿದೆ. ಯಾರಲ್ಲೂ ವೈಚಾರಿಕ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಭಯೋತ್ಪಾದಕರ ಅಡಗುದಾಣಗಳಿಗೆ ನುಗ್ಗಿದಂತೆ ನುಗ್ಗಿ ಅರ್ನಾಬ್ ಗೋಸ್ವಾಮಿಯವರನ್ನು ಎಳೆದುಕೊಂಡು ಹೋಗಿರೋದು ಹಾಗೂ ಪೊಲೀಸ್ ಠಾಣೆಯಲ್ಲಿ ಅವರನ್ನು ನಡೆಸಿಕೊಂಡ ರೀತಿ ನೋಡಿದರೆ ಮಹಾರಾಷ್ಟ್ರ ಸರ್ಕಾರದ ಅಂತಿಮ ಘಳಿಗೆ ಆರಂಭವಾದಂತಿದೆ ಎಂದು ಮಂಗಳೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರೇ, ಠಾಕ್ರೆಗಳು ಮಾಡಿರುವುದಕ್ಕೆ ಯಾಕೆ ಉತ್ತರ ನೀಡುತ್ತಿಲ್ಲ. ಯಾವುದೋ ಕೆಲಸಕ್ಕೆ ಬಾರದ ವಿಷಯಗಳಿಗೆ ಅವಾರ್ಡ್ ವಾಪಸ್ ಮಾಡುತ್ತೇವೆ ಎಂದವರು ಅವರೀಗ ಏನು ಮಾಡುತ್ತಿದ್ದಾರೆ. ಅರ್ನಾಬ್ ಗೋಸ್ವಾಮಿ ಒಂದು ವಿಚಾರದ ಪರವಾಗಿ ಮಾತನಾಡುತ್ತಿದ್ದಾರೆ ಎಂದು ನಿಮಗೆ ಅನ್ನಿಸಿರಬಹುದು. ಅನೇಕ ಬಾರಿ ಅವರು ಬಿಜೆಪಿ ವಿರುದ್ಧವೂ ಮಾತನಾಡಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೋದಿಯವರು ಸಿಎಂ ಆಗಿದ್ದಾಗ ಹಾಗೂ ಪ್ರಧಾನಿಯಾದ ಮೇಲೂ ಅನೇಕ ಮಾಧ್ಯಮಗಳು ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾವೆ. ಆದರೆ ಒಂದು ಬಾರಿಯೂ ಅವರು ಈ ತರಹ ವರ್ತಿಸಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಂದೇಕೆ ಮಾತನಾಡುತ್ತಿಲ್ಲ. ಆದ್ದರಿಂದ ಉದ್ಧವ್ ಠಾಕ್ರೆಯ ಈ ವರ್ತನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಕ್ಷಣ ಅರ್ನಾಬ್ ಗೋಸ್ವಾಮಿಯವರನ್ನು ಬೇಷರತ್ ಬಿಡುಗಡೆ ಮಾಡಲಿ ಎಂದು ಆಗ್ರಹಿಸುತ್ತೇನೆ ಎಂದರು.
ರಾಜ್ಯದ ಉಚ್ಛನ್ಯಾಯಾಲಯ ಮದುವೆಗಾಗಿ ಮತಾಂತರ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಆದ್ದರಿಂದ ಇದರ ವಿರುದ್ಧ ಅಲ್ಲಲ್ಲಿನ ರಾಜ್ಯ ಸರ್ಕಾರಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂದು ಹೇಳಿದರು.
ಸಿಎಂ ಬದಲಾವಣೆಯ ಬಗೆಗಿನ ಯಾವುದೇ ಪ್ರಸ್ತಾವನೆ ಬಿಜೆಪಿ ಕೇಂದ್ರ ಸಮಿತಿಯ ಮುಂದಿಲ್ಲ. ಯಡಿಯೂರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.