ಮಂಗಳೂರು: ಕೋವಿಡ್-19 ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿ ಅನ್ವಯ ಮುನ್ನೆಚ್ಚರಿಕೆ ಕ್ರಮ ವಹಿಸಿ ಗಣೇಶ ಚತುರ್ಥಿ ಆಚರಿಸುವಂತೆ ದ.ಕ.ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣೇಶ ಚತುರ್ಥಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ದ.ಕ.ಜಿಲ್ಲಾಧಿಕಾರಿ - Dakshina Kannada DC rajendra news
ದ.ಕ. ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಹೇಗೆ ಆಚರಣೆ ಮಾಡಬೇಕು ಎನ್ನುವ ಕುರಿತು ಮಾರ್ಗಸೂಚಿಗಳನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
![ಗಣೇಶ ಚತುರ್ಥಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ದ.ಕ.ಜಿಲ್ಲಾಧಿಕಾರಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ](https://etvbharatimages.akamaized.net/etvbharat/prod-images/768-512-04:59:22:1597577362-kn-mng-05-ganesha-chathurthi-margasuchi-script-ka10015-16082020165455-1608f-01352-505.jpg)
ಗಣೇಶ ಚತುರ್ಥಿ ಹಬ್ಬವನ್ನು ಮನೆಯ ಒಳಗೆ ಅಥವಾ ದೇವಸ್ಥಾನಗಳಲ್ಲಿ ಮಾತ್ರ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಾದ ರಸ್ತೆ, ಓಣಿ, ಗಲ್ಲಿ ಹಾಗೂ ಮೈದಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ಇರುವುದಿಲ್ಲ. ಅಲ್ಲದೆ ಮೂರ್ತಿಗಳನ್ನು ಕೆರೆ, ಬಾವಿ, ನದಿ, ಕೊಳ ಹಾಗೂ ಕಲ್ಯಾಣಿಗಳಲ್ಲಿ ಜಲಸ್ತಂಭನಗೊಳಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಗಣೇಶ ಮೂರ್ತಿಯನ್ನು ತರುವಾಗ ಹಾಗೂ ವಿಸರ್ಜನೆ ಮಾಡುವಾಗ ಯಾವುದೇ ರೀತಿಯ ಮೆರವಣೆಗೆಗೆ ಅವಕಾಶವಿಲ್ಲ, ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಮೂರ್ತಿಗಳನ್ನು ಮನೆಯಲ್ಲಿಯೇ ವಿಸರ್ಜನೆ ಮಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ದೇವಸ್ಥಾನಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಅಲ್ಲದೆ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಬೇಕು. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಮಾಸ್ಕ್ ಧಾರಣೆ, ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯ. ಈ ಎಲ್ಲಾ ಅಗತ್ಯ ಕ್ರಮಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಆಯೋಜಕರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.