ಮಂಗಳೂರು (ದಕ್ಷಿಣ ಕನ್ನಡ): ಸಮುದ್ರ ಮಧ್ಯೆ ಸಂಚರಿಸುತ್ತಿದ್ದ ಹಡಗಿನಲ್ಲಿ ಸಿಬ್ಬಂದಿ ಒಬ್ಬರು ಪ್ರಜ್ಞಾಹೀನರಾಗಿದ್ದು, ಅವರನ್ನು ಮಂಗಳೂರಿನಿಂದ ತೆರಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿ ಆಗಿದ್ದಾರೆ . ಎಂ.ಟಿ ಐವರಿ ರೇ ಹಡಗಿನಲ್ಲಿ ಈ ಘಟನೆ ಸಂಭವಿಸಿದೆ.
ನಿನ್ನೆ ರಾತ್ರಿ ಮಂಗಳೂರು ಕೋಸ್ಟ್ ಗಾರ್ಡ್ಗೆ ಐವರಿ ರೇ ಹಡಗಿನಲ್ಲಿ ಸಿಬ್ಬಂದಿಒಬ್ಬರು ಅಸ್ವಸ್ಥ ಗೊಂಡ ಬಗ್ಗೆ ಮಾಹಿತಿ ಬಂದಿತ್ತು. ಅವರು ವಾಷ್ ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದಿದ್ದರು. ಅವರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯ ಇರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮನವಿ ಕೂಡಾ ಬಂದಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಭಾರತೀಯ ಕೋಸ್ಟ್ ಗಾರ್ಡ್ ಇಂಟರ್‌ಸೆಪ್ಟರ್ ಬೋಟ್ C-448 ಮಧ್ಯರಾತ್ರಿ 02.10 ಗಂಟೆಗೆ ಘಟನಾ ಸ್ಥಳಕ್ಕೆ ತೆರಳಿತ್ತು. ಇಂಟರ್ ಸೆಪ್ಟರ್ ಬೋಟ್ನಲ್ಲಿದ್ದ ವೈದ್ಯಕೀಯ ಅಧಿಕಾರಿಯು ಸ್ಥಳದಲ್ಲಿಯೇ ವೈದ್ಯಕೀಯ ಮೇಲ್ವಿಚಾರಣೆ ನಡೆಸಿ ಪ್ರಜ್ಞಾಹೀನ ರೋಗಿಯನ್ನು ಸುರಕ್ಷಿತವಾಗಿ ವರ್ಗಾಯಿಸುವಲ್ಲಿ ಯಶಸ್ವಿಯಾದರು.
ಮಧ್ಯರಾತ್ರಿಯಲ್ಲಿ IB C-448 ಮೂಲಕ ನಡೆಸಿದ ಕಾರ್ಯಾಚರಣೆ ಭಾರತೀಯ ಕೋಸ್ಟ್ ಗಾರ್ಡ್‌ನ ಸಾಮರ್ಥ್ಯವನ್ನು ತೋರಿಸಿದ್ದು, ನೌಕಾಪಡೆಯ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅಷ್ಟೇ ಅಲ್ಲ ಇದು ಆರ್ಥಿಕ ಚಟುವಟಿಕೆಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ. ಕಡಲ ಭದ್ರತೆ ಮತ್ತು ಆರ್ಥಿಕ ಭದ್ರತೆ ಪರಸ್ಪರ ಸಂಬಂಧ ಹೊಂದಿದ್ದು, ನಾವಿಕರ ಸುರಕ್ಷತೆಯು ಅತಿಮುಖ್ಯವಾಗಿದೆ. ಭಾರತೀಯ ಕೋಸ್ಟ್ ಗಾರ್ಡ್ ಸುರಕ್ಷತೆಗೆ ಬದ್ಧವಾಗಿದೆ ಎಂದು ಕೋಸ್ಟ್ ಗಾರ್ಡ್ ಪ್ರಕಟಣೆ ಮೂಲಕ ಅಭಯ ನೀಡಿದೆ.