ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ಕೃತ್ಯಕ್ಕೆ ಜಿಹಾದಿ ಶಕ್ತಿಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಹಿಂದುತ್ವ ಪರ ಇರುವ ಶಾಸಕ. ಹಿಂದೂ ಕಾರ್ಯಕರ್ತರ, ರಾಷ್ಟ್ರೀಯತೆ ಪರವಾಗಿ ಧ್ವನಿ ಎತ್ತಿದ್ದೇನೆ. ಈ ಕಾರಣದಿಂದ ಖಂಡಿತವಾಗಿ ಇದು ಜಿಹಾದಿ ಶಕ್ತಿಗಳ ಕೃತ್ಯ ಎಂದು ಹೇಳಿದ್ದಾರೆ.
ಜಿಹಾದಿ ಶಕ್ತಿಗಳೇ ಕಾರಣ ಎಂದ ಶಾಸಕ ಹರೀಶ್ ಪೂಂಜಾ ಗೃಹ ಸಚಿವರು ಬೆಳಗ್ಗೆ 2 ಬಾರಿ ಕರೆ ಮಾಡಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಮಾತನಾಡಿ, ನನಗೆ ಅಂಗರಕ್ಷಕರನ್ನು ನೀಡಲು ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ದುಷ್ಕರ್ಮಿಗಳು!
ನಾವು ಇಷ್ಟರವರೆಗೆ ಹಿಂದುತ್ವದ ಪರ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇಂತಹ ಘಟನೆಯಿಂದ ಇನ್ನಷ್ಟು ಹಿಂದುತ್ವದ ಪರ ಕೆಲಸ ಮಾಡಲು ಮುಂದೆ ಹೋಗುತ್ತೇನೆ. ಸಮಾಜಮುಖಿ ಹಾಗೂ ಹಿಂದುತ್ವದ ಪರ ಕೆಲಸ ಮಾಡಲು ನಾವು ಯಾವುದೇ ಭದ್ರತೆ ಇಟ್ಟುಕೊಂಡು ಬಂದವರಲ್ಲ. ಇನ್ನು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತೇವೆ. ಸರ್ಕಾರ ಮತ್ತು ಗೃಹ ಇಲಾಖೆ ಭದ್ರತೆ ಬಗ್ಗೆ ಯಾವ ವ್ಯವಸ್ಥೆ ಮಾಡುತ್ತದೆಯೋ, ಅದನ್ನು ಹಿರಿಯರ ಮಾರ್ಗದರ್ಶನದ ಮೂಲಕ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.