ಮಂಗಳೂರು: ಕಾಸರಗೋಡು-ದ.ಕ.ಜಿಲ್ಲೆ ಗಡಿ ಭಾಗ ತಲಪಾಡಿ ಪ್ರದೇಶಕ್ಕೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದ.ಕ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕಾಸರಗೋಡು ಜಿಲ್ಲೆಯ ಕೊರೊನಾ ಸೋಂಕಿತ ರೋಗಿಗಳು ಅತಿ ಹೆಚ್ಚು ಜನರು ದಾಖಲಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಆಸ್ಪತ್ರೆಗಳ ಮೇಲೆ ನಿಗಾ ಇಡುವ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ಕೇರಳ ಹಾಗೂ ಇನ್ನಿತರ ಗಡಿ ಭಾಗಗಳಿಂದ ಬರುವವರ ಮೇಲೆ ಒಂದಷ್ಟು ನಿಗಾ ಇಡುವ ಕೆಲಸಗಳನ್ನು ಮಾಡಲಾಗಿದೆ.
ತಲಪಾಡಿ ಪ್ರದೇಶವು ಕಾಸರಗೋಡು ಗಡಿಭಾಗಕ್ಕೆ ಹತ್ತಿರವಾಗಿದ್ದು, ಕಾಸರಗೋಡು ಕಡೆಯಿಂದ ಬಹಳಷ್ಟು ಜನರು ಹತ್ತಾರು ಕಾರಣಗಳಿಗಾಗಿ ದ.ಕ.ಜಿಲ್ಲೆಯ ಮಂಗಳೂರಿಗೆ ಆಗಮಿಸುತ್ತಾರೆ. ಆದರೆ ಇದೀಗ ಅನಿವಾರ್ಯವಾಗಿ ಗಡಿಯನ್ನು ಮುಚ್ಚುವ ಸ್ಥಿತಿ ಒದಗಿದೆ. ಈ ಸಂದರ್ಭ ಕೇರಳದವರು ಕೋರ್ಟ್ ಮೆಟ್ಟಲೇರಿದರು. ಆದರೆ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬೊಮ್ಮಾಯಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಒಂದಷ್ಟು ಒಪ್ಪಂದದ ಮೇರೆಗೆ ತಲಪಾಡಿ ಗಡಿಯಲ್ಲಿ ಕೆಲವೊಂದು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ದ.ಕ.ಜಿಲ್ಲಾಧಿಕಾರಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ತೆಗೆದುಕೊಂಡಿರುವ ಕ್ರಮಗಳಿಂದ ಕಾಸರಗೋಡು ಕಡೆಯಿಂದ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ವಿಶೇಷವಾಗಿ ಆ ಭಾಗದಿಂದ ಬರುವ ರೋಗಿಗಳನ್ನು ಕೇರಳ ರಾಜ್ಯಕ್ಕೂ ಸಹಕಾರ ಕೊಡುವ ನಿಟ್ಟಿನಲ್ಲಿ ಕೆ.ಎಸ್.ಹೆಗ್ಡೆ ಒಂದೇ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಅದರ ಪರಿಣಾಮ ನಮ್ಮ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣವಾಗಿದೆ. ಆದ್ದರಿಂದ ಗಡಿ ಭಾಗದಲ್ಲಿ ಸಿಸಿಟಿವಿ ಅಳವಡಿಕೆ, ಪೊಲೀಸ್ ಅಧಿಕಾರಿಗಳ, ಸಿಬ್ಬಂದಿ, ವೈದ್ಯರುಗಳ ನಿಯೋಜನೆ ಮಾಡಲಾಗಿದೆ. ಅಲ್ಲದೆ ರೈಲ್ವೆ ಹಳಿ, ದೋಣಿಗಳ ಮುಖಾಂತರವೂ ಯಾರೂ ಬಾರದಂತೆ ಎಚ್ಚರಿಕೆ ವಹಿಸಲಾಗಿದೆ. ಅದಾಗಿಯೂ ಕೇರಳಕ್ಕೆ ದಿನಸಿ ಸಾಮಾಗ್ರಿ ಸರಬರಾಜು ವಾಹನ, ಆ್ಯಂಬುಲೆನ್ಸ್ ಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇಂದು ನಾವು ತಲಪಾಡಿ ಗೇಟ್ ಬಳಿ ಬಂದು ಪರಿಶೀಲನೆ ನಡೆಸಿದ್ದು, ಇಲ್ಲಿ ಪೊಲೀಸರು, ವೈದ್ಯರು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಕೇರಳ ದಿಂದ ರೋಗಿಗಳು ಬಂದಲ್ಲಿ ನಮ್ಮ ಜಿಲ್ಲೆಯ ವೈದ್ಯರ ತಂಡ ಪರಿಶೀಲನೆ ಮಾಡಿ, ಅವರಿಗೆ ಕೊರೊನಾ ಇಲ್ಲವೆಂದು ಖಚಿತಪಡಿಸಿದ ಬಳಿಕ ತುರ್ತು ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಲಾಗುತ್ತಿದೆ. ಆದ್ದರಿಂದ ಅನಗತ್ಯವಾಗಿ ಬರುವವರ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂದರು.
ಕೊರೊನಾ ಸೋಂಕನ್ನು ಮಣಿಸಲು ನಾವು ಬಹಳ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರೋಗಿಗಳ ಚಿಕಿತ್ಸೆಗೆ ಮಾತ್ರ ಗಡಿಯಲ್ಲಿ ಬರುವವರಿಗೆ ಒಳ ಬರಲು ಅವಕಾಶ ನೀಡಲಾಗುತ್ತಿದೆ. ಯಾರಾದರೂ ಸುಳ್ಳು ಮಾಹಿತಿ ನೀಡಿ ಒಳ ನುಸುಳುವುದು, ವದಂತಿಗಳನ್ನು ಹಬ್ಬಿಸುವುದು, ಆಕ್ರಮಣ ಮಾಡುವುದು ಮುಂತಾದ ದುಷ್ಕೃತ್ಯಗಳಲ್ಲಿ ತೊಡಗಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಐದು ಪಾಸಿಟಿವ್ ಪ್ರಕರಣಗಳು ಮಾತ್ರ ಉಳಿದಿದೆ. ಎಪ್ರಿಲ್ 16 ರಂದು ಎಲ್ಲಾ ಸೋಂಕಿತರು ಗುಣಮುಖರಾದರೆ ಒಂದಷ್ಟು ಸಮಾಧಾನಪಡಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.