ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ರಾಜ್ಯದ 80ಕ್ಕೂ ಅಧಿಕ ಎ ದರ್ಜೆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆಯ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಒಂದು ವಾರದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ಮಾಡುವ ಇಚ್ಛೆ ಸರ್ಕಾರಕ್ಕಿದೆ. ಅನೇಕರು ಅದನ್ನು ಪ್ರಾಧಿಕಾರ ಮಾಡುವ ಕಲ್ಪನೆ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಶೀಘ್ರವಾಗಿ ತಿಳಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬಳ್ಪ ಗ್ರಾಮದ ಅನುಷ್ನನ್ನು ಸಮ್ಮಾನಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವಸ್ಥಾನಗಳಲ್ಲಿ ಸೇವೆಗಳನ್ನು ಆರಂಭಿಸುವ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ, ಸಾಮಾನ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲು ಅವಕಾಶ ಮಾಡಲು ಶೀಘ್ರ ಕ್ರಮಕೈಗೊಳ್ಳಲಾಗುವುದು. ಗಣೇಶೋತ್ಸವ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಲು ಅವಕಾಶವಿಲ್ಲ. ಮನೆಯಲ್ಲಿ ಮಾಡಲು ಅಡ್ಡಿಯಿಲ್ಲ ಎಂದರು.