ಮಂಗಳೂರು: ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕೆನ್ನುವ ಕೂಗು ಸಾಕಷ್ಟು ಕಾಲಗಳಿಂದ ಕೇಳಿಬರುತ್ತಿದ್ದು, ಹಿಂದೂ ಪರ ಸಂಘಟನೆಗಳು ಈ ಬಗ್ಗೆ ಒತ್ತಾಯಿಸುತ್ತಿದ್ದವು. ಇದೀಗ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಗಳಲ್ಲಿ ಭಕ್ತಾದಿಗಳು ದೇಗುಲ ಪ್ರವೇಶದ ಮುನ್ನ ವಸ್ತ್ರಸಂಹಿತೆ ಪಾಲಿಸಬೇಕೆನ್ನುವ ಬೋರ್ಡ್ ಹಾಕಲಾಗಿದೆ.
ದೇಗುಲಗಳ ಪಾವಿತ್ರ್ಯತೆ ಕಾಪಾಡುವ, ಹಿಂದೂ ಧಾರ್ಮಿಕ ಮನೋಸ್ಥಿತಿ ಬೆಳೆಸುವ ನಿಟ್ಟಿನಲ್ಲಿ ವಸ್ತ್ರಸಂಹಿತೆಯ ಬೋರ್ಡ್ ಹಾಕಲಾಗಿದೆ. ಈ ವಸ್ತ್ರಸಂಹಿತೆಯು ಮುಜರಾಯಿ ಇಲಾಖೆಯಿಂದಲೇ ಜಾರಿಯಾಗಬೇಕೆನ್ನುವುದನ್ನು ಧಾರ್ಮಿಕ ಪರಿಷತ್ನ ಮುಖಂಡರು ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಿದ್ದರು.
ಆದರೆ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದರೂ, ದೇವಸ್ಥಾನಗಳ ಪ್ರವೇಶ ದ್ವಾರಗಳಲ್ಲಿ ಈ ಬೋರ್ಡ್ ಹಾಕಲಾಗಿದೆ.