ಮಂಗಳೂರು (ದಕ್ಷಿಣ ಕನ್ನಡ):ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಲ್ಯಾಂಡ್ ಆಗಬೇಕಿದ್ದ ವಿಮಾನ ಡೈವರ್ಟ್ ಮಾಡಲಾಗಿದ್ದು, ಸದ್ಯ ಸಮಸ್ಯೆ ಸರಿಪಡಿಸಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ವಿದ್ಯುತ್ ಕಡಿತಗೊಂಡಿತ್ತು. ಆದ್ದರಿಂದ ರನ್ ವೇನಲ್ಲಿರುವ ದೀಪಗಳು ಉರಿಯುತ್ತಿರಲಿಲ್ಲ. ಪರಿಣಾಮ ಮುಂಬೈನಿಂದ ಆಗಮಿಸಿದ ಇಂಡಿಗೋ 6E5188 ವಿಮಾನ ಲ್ಯಾಂಡ್ ಆಗದೇ ವಾಪಸ್ ಆಗಿದೆ. ಎಟಿಸಿ ಸೂಚನೆ ಹಿನ್ನೆಲೆಯಲ್ಲಿ ಕೇರಳದ ಕಣ್ಣೂರು ಏರ್ಪೋರ್ಟ್‌ನಲ್ಲಿ ಇದು ಲ್ಯಾಂಡ್ ಆಗಿದೆ.
ಅಲ್ಲದೆ ತಾಂತ್ರಿಕ ಸಮಸ್ಯೆ ಸರಿಪಡಿಸುವವರೆಗೆ ಮಂಗಳೂರು ಏರ್ಪೋರ್ಟ್‌ನಲ್ಲಿ ಲ್ಯಾಂಡಿಂಗ್, ಟೇಕಾಫ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಕೆಲವೇ ಹೊತ್ತಿನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಮತ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಹಾಗೂ ಬೆಂಗಳೂರಿನಿಂದ ಬರಬೇಕಿದ್ದ ವಿಮಾನಗಳ ಲ್ಯಾಂಡಿಂಗ್ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು.
ಅಲ್ಲದೆ ಬಹರೈನ್ಗೆ ತೆರಳಬೇಕಿದ್ದ ಏರ್ ಇಂಡಿಯಾ IX 789 ಸಂಚಾರ ವಿಳಂಬವಾಗಲಿದೆ. ಪ್ರಸ್ತುತ ಮತ್ತೆ ಯಥಾಸ್ಥಿತಿಗೆ ಏರ್ಪೋರ್ಟ್ ರನ್‌ವೇ ಬಂದಿದೆ. ರನ್‌ವೇ ಲೈಟಿಂಗ್‌ಗಳನ್ನು ಇಂಜಿನಿಯರ್‌ಗಳ ತಂಡ ಸರಿಪಡಿಸಿದ್ದು, ಮತ್ತೆ ವಿಮಾನಗಳ ಹಾರಾಟಕ್ಕೆ ಆರಂಭವಾಗಿದೆ. ಸುಮಾರು ಎರಡು ಗಂಟೆಗಳ ಕಾಲ ಏರ್ಪೋರ್ಟ್ ರನ್‌ವೇ ಸ್ಥಗಿತವಾಗಿತ್ತು. ರಾತ್ರಿ 7.30 ರಿಂದ 9.30ರವರಗೆ ಏರ್ಪೋರ್ಟ್ ರನ್‌ವೇನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು.
ಇದನ್ನೂ ಓದಿ:ಟೈರ್ ಸ್ಫೋಟಗೊಂಡು ಲಾರಿಗೆ ಗುದ್ದಿದ ಕಾರು: ಸ್ಥಳದಲ್ಲೇ ಆರು ಜನರ ಸಾವು.. ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ