ಮಂಗಳೂರು: ಸಣ್ಣ ಮನಸ್ತಾಪದಿಂದ ಮನೆ ತೊರೆದ ಕೇರಳದ ವೃದ್ಧರೋರ್ವರು ಮಂಗಳೂರಿಗೆ ಬಂದು ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡು ಬೀದಿಪಾಲಾಗಿದ್ದರು. ಅವರ ಸ್ಥಿತಿ ಗಮಿನಿಸಿದ 'ಟೀಮ್ ಬಿ ಹ್ಯೂಮನ್' ಸಂಸ್ಥೆ ಕೊನೆಗೂ ಆ ವೃದ್ಧನನ್ನು ಕುಟುಂಬದೊಂದಿಗೆ ಸೇರಿಸಿ ಮಾನವೀಯತೆ ಮೆರೆದಿದೆ.
ಪಯ್ಯನ್ನೂರು ಕಾವಂಚಲ್ ಎಂಬ ಊರಿನ ಬಾಲನ್(69) ದಿನಗೂಲಿ ನೌಕರನಾಗಿ ದುಡಿಯುತ್ತಿದ್ದರು. ತಮ್ಮ ಪತ್ನಿ ಪಾರ್ವತಿ ಮತ್ತು ಪುತ್ರಿ ಶೀಬಾರೊಂದಿಗೆ ನೆಲೆಸಿದ್ದ ಬಾಲನ್ ಕುಟುಂಬದೊಂದಿಗೆ ಮನಸ್ತಾಪ ಮಾಡಿಕೊಂಡು ಮನೆ ತೊರೆದು ಬಂದಿದ್ದರು.
ಆದರೆ ಲಾಕ್ಡೌನ್ ವೇಳೆ ಮಂಗಳೂರಿನಲ್ಲಿಯೇ ಸಿಲುಕಿದ್ದರು. ಮನೆಗೆ ತೆರಳಲಾಗದೆ ಸಂಕಷ್ಟ ಎದುರಿಸಿದರು. ಇದೇ ವೇಳೆ ರಸ್ತೆ ಅಪಘಾತ ಸಹ ಉಂಟಾಗಿ ಒಂದು ಕಾಲು ಕಳೆದುಕೊಡು ಇನ್ನಷ್ಟು ಸಂಕಷ್ಟಕ್ಕೆ ಬಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಹಂಪನಕಟ್ಟೆಯ ಫುಟ್ಪಾತ್ನಲ್ಲಿಯೇ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದೊದಗಿತ್ತು.