ಕರ್ನಾಟಕ

karnataka

ETV Bharat / state

ತಾ.ಪಂ ವ್ಯವಸ್ಥೆ ಉಳಿಯಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ

ತಾಲೂಕು ಪಂಚಾಯತ್​ ವ್ಯವಸ್ಥೆ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದರೊಂದಿಗೆ 2ನೇ ಸ್ತರದ ನಾಯಕತ್ವವನ್ನು ಬೆಳೆಸಲು ಪೂರಕವಾಗಿದೆ. ಈ ನಿಟ್ಟಿನಲ್ಲಿ ತಾ.ಪಂನ್ನು ಉಳಿಸಿಕೊಂಡು, ಹೆಚ್ಚುವರಿ ಅನುದಾನಗಳನ್ನು ನೀಡುವುದರೊಂದಿಗೆ ಅದರ ಸಬಲೀಕರಣ ಮಾಡಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Kadaba
ಕಡಬ ತಾ.ಪಂನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

By

Published : Feb 27, 2021, 8:25 AM IST

ಕಡಬ:ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಪಡಿಸಬೇಕು, ರದ್ದುಪಡಿಸಬಾರದು ಎನ್ನುವ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ನನ್ನ ಅಭಿಪ್ರಾಯದ ಪ್ರಕಾರ ತಾ.ಪಂ.ವ್ಯವಸ್ಥೆ ಉಳಿಯಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಡಬ ತಾ.ಪಂನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ...

ಶುಕ್ರವಾರ ದ.ಕ ಜಿಲ್ಲಾ ಪಂ. ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ ಅನುದಾನದಡಿ ಮತ್ತು ಇತರ ಅನುದಾನದಿಂದ ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಡಬ ತಾ.ಪಂನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ನಾಮ ಫಲಕ ಅನಾವರಣ ಮಾಡಿ ಅವರು ಮಾತನಾಡಿದರು. ತಾಲೂಕು ಪಂಚಾಯತ್​ ವ್ಯವಸ್ಥೆ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವುದರೊಂದಿಗೆ 2ನೇ ಸ್ತರದ ನಾಯಕತ್ವವನ್ನು ಬೆಳೆಸಲು ಪೂರಕವಾಗಿದೆ. ಈ ನಿಟ್ಟಿನಲ್ಲಿ ತಾ.ಪಂನ್ನು ಉಳಿಸಿಕೊಂಡು, ಹೆಚ್ಚುವರಿ ಅನುದಾನಗಳನ್ನು ನೀಡುವುದರೊಂದಿಗೆ ಅದರ ಸಬಲೀಕರಣ ಮಾಡಬೇಕು. ತಾಲೂಕಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ತಾ.ಪಂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳನ್ನು ನೀಡುತ್ತದೆ. ಈ ಹಿನ್ನೆಲೆ ತಾ.ಪಂನ್ನು ರದ್ದುಪಡಿಸದಂತೆ ಸಂಬಂಧಪಟ್ಟ ಸಚಿವರನ್ನು ಆಗ್ರಹಿಸಲಾಗುವುದು ಎಂದು ತಿಳಿಸಿದರು.

ತಾ.ಪಂ ವ್ಯವಸ್ಥೆಯಲ್ಲಿ ಅಧಿಕಾರಿಗಳ ಕಾರ್ಯದಕ್ಷತೆ, ಜನಪ್ರತಿನಿಧಿಗಳ ದೂರಗಾಮಿ ಚಿಂತನೆ ಸದೃಢ ಪಂಚಾಯತ್ ವ್ಯವಸ್ಥೆಯನ್ನು ಉಳಿಕೊಳ್ಳಲು ಪೂರಕವಾಗುತ್ತದೆ. ತಾ.ಪಂನಲ್ಲಿ ಅಧಿಕಾರ ನಡೆಸುವವರು ದಡ್ಡರಾದರೆ ಕೆಲವರು ತಲೆ ಮೇಲೆ ಕೂರುತ್ತಾರೆ. ಅದಕ್ಕಾಗಿ ನಾವು ಬುದ್ಧಿವಂತರಾಗಬೇಕು. ಸಭೆಗಳು ರಾಜಕೀಯ ಕೆಸರೆಚಾಟಕ್ಕೆ ಸಿಮಿತವಾಗದೆ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಿಲಾನ್ಯಾಸ ನೆರವೇರಿಸಿದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ ಕಡಬ ತಾಲೂಕು ಅಭಿವೃದ್ಧಿಯಾಗಬೇಕಾದರೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಮಿನಿವಿಧಾನ ಸೌಧ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ತಾ.ಪಂ ಕಟ್ಟಡ ಕೂಡಾ ಶೀಘ್ರದಲ್ಲಿ ನಿರ್ಮಾಣವಾಗಲಿದೆ. ಲೋಕೋಪಯೋಗಿ ಇಲಾಖಾ ಉಪವಿಭಾಗದ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು, ಹಂತ ಹಂತವಾಗಿ ತಾ.ಪಂ ಅನುಷ್ಠಾನಕ್ಕೆ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಅಧಿಕಾರಿಗಳು, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಜನಪ್ರತಿನಿಧಿಗಳು ಭಾಗವಹಿಸಿದ್ದರು.

ABOUT THE AUTHOR

...view details