ಕರ್ನಾಟಕ

karnataka

ETV Bharat / state

ರೈತರ ಕೆಲಸಗಳನ್ನು ಆದ್ಯತೆಯಿಂದ ಮಾಡಿಕೊಡಿ; ಶಾಸಕ ಮಠಂದೂರು ಸೂಚನೆ - ಪುತ್ತೂರು

ರೈತರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳು ದೊರಕುತ್ತವೆ. ಆದರೆ, ಇದನ್ನು ಪಡೆದುಕೊಳ್ಳಲು ರೈತರು ಹತ್ತಾರು ಬಾರಿ ಇಲಾಖೆಗಳ ಕಚೇರಿಗಳನ್ನು ಅಲೆದಾಡಬೇಕಾಗುತ್ತಿದೆ. ಈ ನಿಟ್ಟಿನಲ್ಲಿ ರೈತರ ಕೆಲಸಗಳನ್ನು ಆದ್ಯತೆ ನೆಲೆಯಲ್ಲಿ ಮಾಡಿಸಿಕೊಡಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು.

KDP Meeting
ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ

By

Published : Jan 13, 2021, 12:06 PM IST

ಪುತ್ತೂರು: ಅಭಿವೃದ್ಧಿಯ ದೃಷ್ಟಿಯಿಂದ ನಡೆಯುವ ಕೆಡಿಪಿ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಸಮಯ ಪಾಲನೆಗೆ ಮೊದಲ ಆದ್ಯತೆ ನೀಡಬೇಕು. ಈ ಬಗ್ಗೆ ಯಾವುದೇ ರಿಯಾಯಿತಿ ಇಲ್ಲದೆ ಸಭೆಗೆ ಆಗಮಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ

ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕರು, ರೈತರಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳು ದೊರಕುತ್ತವೆ. ಆದರೆ, ಇದನ್ನು ಪಡೆದುಕೊಳ್ಳಲು ರೈತರು ಹತ್ತಾರು ಬಾರಿ ಇಲಾಖೆಗಳ ಕಚೇರಿಗಳನ್ನು ಅಲೆದಾಡಬೇಕಾಗುತ್ತಿದೆ. ಈ ನಿಟ್ಟಿನಲ್ಲಿ ರೈತರ ಕೆಲಸಗಳನ್ನು ಆದ್ಯತೆ ನೆಲೆಯಲ್ಲಿ ಮಾಡಿಸಿಕೊಡಲು ಅಧಿಕಾರಿಗಳು ಗಮನಹರಿಸಬೇಕು. ತಮ್ಮ ತಮ್ಮ ಇಲಾಖೆಗಳ ಸಿಬಂದಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ತಿಳಿಸಿದರು.

ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ಆರಾಮವಾಗಿ ಕಾರ್ಯ ನಿರ್ವಹಿಸುವುದರ ಬದಲು ತಮ್ಮ ಇಲಾಖೆಯಿಂದ ಆಗಬೇಕಾಗಿರುವ ಕಾರ್ಯಕ್ರಮಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಆದ್ಯತೆ ನೀಡಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನರು ಸರ್ಕಾರವನ್ನು ದೂಷಿಸುವಂತಾಗುತ್ತಿದೆ. ಆದ್ದರಿಂದ ಪ್ರತಿಯೊಂದು ಇಲಾಖೆಗಳು ಇಂತಹ ಆರೋಪಗಳಿಗೆ ಅವಕಾಶ ಮಾಡಿಕೊಡದೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಪುತ್ತೂರು ತಾಲೂಕಿನಲ್ಲಿ ಒಟ್ಟು 12,313 ರೈತರ ರೂ. 90.78 ಕೋಟಿ ಮೊತ್ತ ಸಾಲವನ್ನು ಮನ್ನಾ ಮಾಡಲಾಗಿದೆ. ಇನ್ನೂ 2,352 ರೈತರ ರೂ.21.40 ಕೋಟಿ ಮೊತ್ತ ಸಾಲ ಮನ್ನಾಕ್ಕೆ ಬಾಕಿ ಉಳಿದಿದೆ. ಕೆಲವೊಂದು ತಾಂತ್ರಿಕ ಕಾರಣಗಳಿಗಾಗಿ ಸಾಲ ಮನ್ನಾ ಮಾಡಲು ಬಾಕಿ ಉಳಿದಿದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದರು. ಇದಕ್ಕಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಿಕೊಂಡು ರೈತರ ಬಾಕಿ ಸಾಲ ಮನ್ನಾ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಹಿಂದುಳಿದವರ ಅಭಿವೃದ್ಧಿ ನಿಗಮ ಮತ್ತು ಇಲಾಖೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇಲಾಖೆ ಶೂನ್ಯ ಪ್ರಗತಿಯನ್ನು ದಾಖಲಿಸಿದೆ. ಅಧಿಕಾರಿಗಳು ಈ ಕುರಿತು ಯಾವುದೇ ಮುತುವರ್ಜಿ ವಹಿಸುತ್ತಿಲ್ಲ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದಾಗ, ಈ ಇಲಾಖೆಯಲ್ಲಿ ರಾಜ್ಯ ಮಟ್ಟದಿಂದಲೇ ಟೆಂಡರ್ ನಡೆಯಬೇಕಾಗುತ್ತದೆ. ಅಲ್ಲಿಂದ ನಮಗೆ ಸೂಕ್ತ ಸ್ಪಂದನೆ ದೊರಕದ ಕಾರಣ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಇಲಾಖೆಯ ಅಧಿಕಾರಿ ಉತ್ತರಿಸಿದರು.

ನೀವು ನಿಮ್ಮ ಹೊಣೆಗಾರಿಯನ್ನು ಸರಿಯಾಗಿ ನಿಭಾಯಿಸಿ. ಮುಂದಿನ ಸಭೆಯೊಳಗಾಗಿ ನಿಮ್ಮ ಇಲಾಖೆಯಿಂದ ಎಲ್ಲಾ ಸವಲತ್ತುಗಳು ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದು ಆದೇಶಿಸಿದರು.

ABOUT THE AUTHOR

...view details