ಪುತ್ತೂರು:ಸಾಹಿತ್ಯ ಸಾಂಸ್ಕೃತಿಕ ಗುರುವಾಗಿರುವ ಡಾ. ಶಿವರಾಮ ಕಾರಂತರು ಮತ್ತು ಆಧ್ಯಾತ್ಮಿಕ ಗುರುವಾದ ಸ್ವಾಮಿ ವಿವೇಕಾನಂದರು ಆದರ್ಶ ಮೆರೆದ ದಿಗ್ಗಜರು. ಅವರ ಆಶಯಗಳು ಯುವ ಜನತೆಗೆ ಸದಾ ದಾರಿದೀಪ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಕರ್ನಾಟಕ ಯುವ ಸಂಘಗಳ ಒಕ್ಕೂಟದ ವತಿಯಿಂದ ಪುತ್ತೂರು ಬಾಲವನದಲ್ಲಿ ನಡೆದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಶಿವರಾಮ ಕಾರಂತರು ಪ್ರಕೃತಿಯ ಜೊತೆಗಿನ ಬದುಕನ್ನು ಅನಾವರಣಗೊಳಿಸಿ, ಅದರಲ್ಲಿ ಬದುಕುವ ಚಿಂತನೆಯನ್ನು ಹುಟ್ಟುಹಾಕಿದವರು. ಸಾಹಿತ್ಯ, ಸಾಂಸ್ಕೃತಿಕವಾಗಿ ಪರಿಸರವನ್ನು ಕಟ್ಟಿ ಬೆಳೆಸುವ ಮೂಲಕ ನಮ್ಮ ಬದುಕನ್ನು ಚೈತನ್ಯಮಯಗೊಳಿಸುವ ಪ್ರಯತ್ನ ನಡೆಸಿದರು. ಬಾಲವನದಂತಹ ಪ್ರಕೃತಿದತ್ತ ತಾಣವನ್ನು ನಿರ್ಮಿಸಿ ಆಹ್ಲಾದಕರ ಮನೋಭೂಮಿಕೆಗೆ ಅರ್ಥ ಕಂಡುಕೊಂಡವರು. ಸ್ವಾಮಿ ವಿವೇಕಾನಂದ ಅವರು ತಮ್ಮ ಚಿಕ್ಕ ಪ್ರಾಯದಲ್ಲಿಯೇ ಜಗತ್ತನ್ನು ನೋಡುವ ದೃಷ್ಟಿಕೋನವನ್ನು ನಾಡಿಗೆ ನೀಡಿದರು. ಈ ದಿಗ್ಗಜರ ಸದಾಶಯ ನಮ್ಮ ಬದುಕಿಗೆ ಅರ್ಥಪೂರ್ಣ ಚಿಂತನೆ ನೀಡಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.