ಮಂಗಳೂರು (ದಕ್ಷಿಣ ಕನ್ನಡ):ಕಳೆದ ರಾತ್ರಿ ಅಂಗಡಿ ಮಾಲೀಕ ಜಲೀಲ್ ಎಂಬವರ ಹತ್ಯೆ ನಡೆದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್ ಸುತ್ತಮುತ್ತಲಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಆದೇಶಿಸಿದ್ದಾರೆ.
27ರ ವರೆಗೆ ನಿಷೇಧಾಜ್ಞೆ: ಇಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 27 ಮುಂಜಾನೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಸರ್ಕಾರದಿಂದ ಮತ್ತು ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗಿದು ಅನ್ವಯಿಸುವುದಿಲ್ಲ. ಕ್ರಿಸ್ಮಸ್ ಆಚರಣೆ, ಧಾರ್ಮಿಕ ಕಾರ್ಯಕ್ರಮ ಮತ್ತು ಅಗತ್ಯ ತುರ್ತು ಸೇವೆಗಳಿಗೂ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.
ಮದ್ಯದಂಗಡಿಗಳು ಬಂದ್:ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ.
ಕೈಗಾರಿಕೆಗಳಲ್ಲಿ ಪಾಳಿ ಬದಲಾವಣೆಗೆ ಸೂಚನೆ:ಸುರತ್ಕಲ್, ಬಜಪೆ, ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಸಂಸ್ಥೆಗಳು ಕೆಲಸದ ಪಾಳಿಯನ್ನು ಇಂದು ಮತ್ತು ನಾಳೆ ಸಂಜೆ 6 ಗಂಟೆವರೆಗೆ ಬದಲಿಸುವಂತೆ ಸೂಚಿಸಲಾಗಿದೆ. ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಿಬ್ಬಂದಿ ಹೊರಗಡೆ ಓಡಾಡುವಂತಿಲ್ಲ.
ನಿನ್ನೆ ರಾತ್ರಿ ನಡೆದಿದ್ದೇನು?:ಶನಿವಾರ ರಾತ್ರಿ ಸುರತ್ಕಲ್‌ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿ ಜಲೀಲ್ ಎಂಬುವವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೈತಂಗಡಿಯಲ್ಲಿ ಜಲೀಲ್ ದಿನಸಿ ಅಂಗಡಿ ಹೊಂದಿದ್ದಾರೆ. ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಆರೋಪಿಗಳು ಎದೆಯ ಭಾಗಕ್ಕೆ ಚೂರಿಯಿಂದ ಬಲವಾಗಿ ಇರಿದು ಪರಾರಿಯಾಗಿದ್ದರು.
ಚಾಕು ಇರಿತಕ್ಕೊಳಗಾದ ಜಲೀಲ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪೋಸ್ಟ್ ಮಾರ್ಟಂ ವ್ಯವಸ್ಥೆಗಾಗಿ ಅವರ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಹತ್ಯೆ ಪ್ರಕರಣದಿಂದಾಗಿ ಸುರತ್ಕಲ್ನ ಸುತ್ತಮುತ್ತ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ಮನೆಗೆ ಮೃತದೇಹ ರವಾನೆ:ಜಲೀಲ್ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರದಿಂದ ಇಂದು ಕೃಷ್ಣಾಪುರದ ಅವರ ಮನೆಗೆ ರವಾನಿಸಲಾಗಿದೆ. ಕಾಟಿಪಳ್ಳ 9ನೇ ಬ್ಲಾಕ್ನಲ್ಲಿರುವ ನಿವಾಸದಲ್ಲಿ ಕುಟುಂಬ ಸದಸ್ಯರಿಗೆ, ಸಾರ್ವಜನಿಕರಿಗೆ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪಂಜಿಮೊಗರಿನ ಮಸೀದಿ ಆವರಣದಲ್ಲಿ ದಫನ್ ಕಾರ್ಯ ನಡೆಯಲಿದೆ.