ಮಂಗಳೂರು:ಸುರತ್ಕಲ್‌ನ ಕೃಷ್ಣಾಪುರ ನಿವಾಸಿ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಜಲೀಲ್ ಅಂತ್ಯಕ್ರಿಯೆ ನಡೆದ 24 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಲ್ಲಿ ಮೂರು ಮಂದಿಯಲ್ಲಿ ಇಬ್ಬರು ಜಲೀಲ್ನನ್ನು ಫ್ಯಾನ್ಸಿ ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದಿದ್ದರು. ಮತ್ತೊಬ್ಬ ಕೊಲೆ ಆರೋಪಿಗಳನ್ನು ಬೈಕ್ನಲ್ಲಿ ಪರಾರಿ ಆಗಲು ಸಹಕರಿಸಿದ್ದ. ಪೊಲೀಸ್ ತನಿಖಾ ತಂಡ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಈ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದೆ. ಬಂಧಿತರನ್ನು ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ, ಉಡುಪಿಯ ಹೆಜಮಾಡಿ ನಿವಾಸಿ ಎಚ್ ಸವಿನ್ ಕಾಂಚಾನ್ ಅಲಿಯಾಸ ಮುನ್ನ ಹಾಗೂ ಕೃಷ್ಣಾಪೂರ ಮೂರನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು ಎಂದು ಗುರುತಿಸಲಾಗಿದೆ
ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. 'ಪ್ರತ್ಯಕ್ಷದರ್ಶಿಗಳ ಮುಂದೆ ಪೆರೆಡ್ ಮಾಡಿಸುವ ಕ್ರಮ ಇರುವುದರಿಂದ ಆರೋಪಿಗಳ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ. ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಆ ಬಳಿಕ ಮುಂದಿನ ತನಿಖೆಗೆ 14 ದಿನಗಳ ಕಾಲ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ' ಎಂದು ತಿಳಿಸಿದ್ದಾರೆ.
'ಈ ಮೂವರು ಆರೋಪಿಗಳನ್ನು ನಿನ್ನೆ ರಾತ್ರಿಯೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಆರೋಪಿಗಳಲ್ಲಿ ಇಬ್ಬರು ಈ ಹಿಂದೆ ವಿವಿಧ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದವರು. ಆರೋಪಿಗಳಲ್ಲಿ ಓರ್ವನು 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿಯೂ ಭಾಗಿಯಾಗಿದ್ದ' ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.