ಮಂಗಳೂರು: ಸುರತ್ಕಲ್‌ನ ಕೃಷ್ಣಾಪುರ ನಿವಾಸಿ ಜಲೀಲ್ ಕೊಲೆ ಕೇಸ್‌ನಲ್ಲಿ ನಾಲ್ಕನೇ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಲಕ್ಷ್ಮೀಶ ದೇವಾಡಿಗ ಬಂಧಿತ ಆರೋಪಿ. ಈತ ಕೃಷ್ಣಾಪುರ ನಾಲ್ಕನೇ ಬ್ಲಾಕ್ ನಿವಾಸಿಯಾಗಿದ್ದಾನೆ. ಕೊಲೆಗೆ ಸಹಕಾರ ನೀಡಿದ ಆರೋಪದಡಿ ಈತನನ್ನು ಬಂಧಿಸಲಾಗಿದೆ.
ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ (21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) ಹಾಗು ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಜಲೀಲ್ ಎಂಬಾತನ ಫ್ಯಾನ್ಸಿ ಅಂಗಡಿಗೆ ನುಗ್ಗಿ ಆತನಿಗೆ ಚೂರಿಯಿಂದ ಇರಿದು ಹತ್ಯೆಗೈದಿದ್ದರು.
ಪೊಲೀಸ್ ತನಿಖಾ ತಂಡ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಮೊನ್ನೆ ರಾತ್ರಿಯೇ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, ದಸ್ತಗಿರಿ ಮಾಡಿದೆ. ಇದೀಗ ಕೊಲೆಗೆ ಸಹಕಾರ ನೀಡಿದ ಆರೋಪದ ಮೇಲೆ ಮತ್ತೋರ್ವ ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ:ಸುರತ್ಕಲ್ ಜಲೀಲ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಘಟನೆಯ ಹಿನ್ನೆಲೆ ಹೀಗಿದೆ..: ಶನಿವಾರ ರಾತ್ರಿ ಸುರತ್ಕಲ್‌ನಲ್ಲಿ ದುಷ್ಕರ್ಮಿಗಳಿಬ್ಬರು ಕೃಷ್ಣಾಪುರ ನಿವಾಸಿ ಜಲೀಲ್ ಎಂಬುವವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು. ನೈತಂಗಡಿಯಲ್ಲಿ ಜಲೀಲ್ ಫ್ಯಾನ್ಸಿ ಅಂಗಡಿ ಹೊಂದಿದ್ದಾರೆ. ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಆರೋಪಿಗಳು ಎದೆಯ ಭಾಗಕ್ಕೆ ಬಲವಾಗಿ ಇರಿದು ಪರಾರಿಯಾಗಿದ್ದರು.
ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಜಲೀಲ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಹತ್ಯೆ ಪ್ರಕರಣದಿಂದಾಗಿ ಸುರತ್ಕಲ್‌ನ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಸುರತ್ಕಲ್‌ನಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ತನಿಖೆಗೆ 8 ಅಧಿಕಾರಿಗಳ ತಂಡ ರಚಿಸಲಾಗಿತ್ತು.
ಜಲೀಲ್ ಮೃತದೇಹ ಇರಿಸಿ ಪ್ರತಿಭಟನೆ:ಸ್ಥಳೀಯ ನಿವಾಸಿಗಳು ಜಲೀಲ್ ಮೃತದೇಹ ಇರಿಸಿ ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಆಗ್ರಹಿಸಿದ್ದರು.