ಮಂಗಳೂರು: ಸುರತ್ಕಲ್ನ ಎನ್‌ಐಟಿಕೆ ಟೋಲ್ ಗೇಟ್ ರದ್ದು ಮಾಡಲು ಆದೇಶವಾದರೂ ಟೋಲ್ ಗೇಟ್ ಸನಿಹ ಅನಿರ್ದಿಷ್ಟಾವಧಿ ಧರಣಿ 30 ನೇ ದಿನಕ್ಕೆ ಕಾಲಿರಿಸಿದೆ. ಎನ್‌ಐಟಿಕೆ ಟೋಲ್ ಗೇಟ್ ಅಕ್ರಮವಾಗಿದ್ದು, ಇದನ್ನು ತೆರವುಗೊಳಿಸಬೇಕೆಂದು ಅ.28 ರಿಂದ ಹಗಲು ರಾತ್ರಿ ಧರಣಿ ಆರಂಭಿಸಲಾಗಿತ್ತು. ಇದಕ್ಕೂ ಮೊದಲು ಹೋರಾಟಗಾರರು ಟೋಲ್ ಗೇಟ್ಗೆ ಮುತ್ತಿಗೆ ಹಾಕಿ ಕೆಲಕಾಲ ಟೋಲ್ ಸಂಗ್ರಹ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.
30ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ:ಟೋಲ್ ಗೇಟ್ ವಿರೋಧಿ ಹೋರಾಟಕ್ಕೆ ಮಣಿದು ಸುರತ್ಕಲ್ ಎನ್‌ಐಟಿಕೆ ಟೋಲ್ ಗೇಟ್ ರದ್ದು ಮಾಡಿ ಆದೇಶ ಹೊರಡಿಸಲಾಗಿತ್ತು. ನ.14 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಟ್ಚೀಟ್ ಮಾಡಿ ಟೋಲ್ ಗೇಟ್ ರದ್ದಾದ ಮಾಹಿತಿ ಹಂಚಿಕೊಂಡಿದ್ದರು. ಈ ಬಗ್ಗೆ ಆದೇಶವಾಗಿ 14 ದಿನಗಳಾದರೂ ಟೋಲ್ ಸಂಗ್ರಹ ನಿಂತಿಲ್ಲ. ಈ ಕಾರಣದಿಂದಾಗಿ ಎನ್‌ಐಟಿಕೆ ಟೋಲ್ ಗೇಟ್ ವಿರುದ್ಧ ಹಗಲು ರಾತ್ರಿ ಧರಣಿ ಮುಂದುವರಿಯುತ್ತಿದೆ. ಕಳೆದ 30 ದಿನಗಳಿಂದ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.