ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅಲ್ಲಿನ ಸಂಸ್ಥೆಗಳ ಗೌರವಕ್ಕೆ ಚ್ಯುತಿ ತಂದ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಹಾಗೂ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ ಸೋಮನಾಥ್ ನಾಯಕ್ ಅವರಿಗೆ ಸ್ಥಳೀಯ ನ್ಯಾಯಾಲಯ ವಿಧಿಸಿದ್ದ 3 ತಿಂಗಳ ಜೈಲು ಶಿಕ್ಷೆ ತೀರ್ಪನ್ನು ಎತ್ತಿಹಿಡಿದಿದೆ.
ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯವು, ಕರ್ನಾಟಕ ಹೈಕೋರ್ಟ್ ಹಾಗೂ ಬೆಳ್ತಂಗಡಿಯ ನ್ಯಾಯಾಲಯಗಳು ನೀಡಿದ ತೀರ್ಪುಗಳ ಬಗ್ಗೆ ತಾನು ಮಧ್ಯಪ್ರವೇಶಿಸುವ ಯಾವುದೇ ಅಗತ್ಯತೆ ಕಂಡು ಬಂದಿಲ್ಲ. ನ್ಯಾಯಾಲಯದ ಪ್ರತಿಬಂಧಕಾಜ್ಞೆ ಊರ್ಜಿತದಲ್ಲಿದ್ದರೂ ಅರ್ಜಿದಾರರಾದ ಸೋಮನಾಥ್ ನಾಯಕ್ ಪದೇ ಪದೆ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂದಿದೆ. ಅಲ್ಲದೆ, ತಪ್ಪಿತಸ್ಥ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಛೀಮಾರಿ ಹಾಕಿದ್ದು, ಕ್ಷಮಾಪಣೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅಲ್ಲಿನ ಸಂಸ್ಥೆಗಳ ಗೌರವಕ್ಕೆ ಚ್ಯುತಿ ತಂದ ಬಗ್ಗೆ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ನ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಮತ್ತು ಇತರ 5 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಬೆಳ್ತಂಗಡಿ ಸಿವಿಲ್ ನ್ಯಾಯಾಲಯವು 2013ರ ನ.5ರಂದು ಸೋಮನಾಥ್ ಮತ್ತು ಇತರ 5 ಮಂದಿಯ ವಿರುದ್ಧ ಪ್ರತಿಬಂಧಕಾಜ್ಞೆ ಮಾಡಿತ್ತು.
ಆದರೆ, ಇದಾದ ಬಳಿಕವೂ ಕೂಡ ನ್ಯಾಯಾಲಯದ ಆದೇಶ ದಿಕ್ಕರಿಸಿ ಸೋಮನಾಥ ನಾಯಕ್ ಸಾಮಾಜಿಕ ಜಾಲತಾಣಗಳ ಮೂಲಕ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಸುಳ್ಳು ಆರೋಪ ಮುಂದುವರೆಸಿದ್ದರು. ಈ ವಿಚಾರವು ನ್ಯಾಯಾಲಯದ ಮೆಟ್ಟಿಲೇರಿದ್ದು, ಸುದೀರ್ಘ ವಿಚಾರಣೆ ಬಳಿಕ ಸೋಮನಾಥ ನಾಯಕ್ ದೋಷಿ ಎಂದು ಪರಿಗಣಿಸಿ 3 ತಿಂಗಳ ಸಜೆ ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ 4.5 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದ ಕೋರ್ಟ್ ನಾಯಕ್ ಅವರ ಆಸ್ತಿಯನ್ನೂ ಸಹ ಮುಟ್ಟುಗೋಲು ಹಾಕಬಹುದು ಎಂದು ಆದೇಶಿಸಿತ್ತು.