ಪುತ್ತೂರು: ಕೊರೊನಾ ಪ್ರಚೋದಿತ ಲಾಕ್ಡೌನ್ನಿಂದ ಮನೆಯಲ್ಲೇ ಉಳಿದುಕೊಂಡಿರುವ ಅನೇಕರು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ಊರಿಗೆ ಬಂದಿರುವ ಸುಪ್ರೀಂಕೋರ್ಟ್ನ ಹೆಚ್ಚುವರಿ ಸಾಲಿಟರ್ ಜನರಲ್ ಒಬ್ಬರು ತಮ್ಮ ಮನೆಯ ಕೃಷಿ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ದೇಶದ ಅತೀ ಉನ್ನತ ಹುದ್ದೆಯಲ್ಲಿರುವ ಇವರು ಸಾಮಾನ್ಯ ಕೃಷಿಕನಂತೆ ಉಳುಮೆ ಮಾಡುತ್ತಿದ್ದು, ಕೃಷಿಯನ್ನು ತ್ಯಜಿಸಿ ನಗರ ಜೀವನಕ್ಕೆ ಒಗ್ಗಿಕೊಂಡ ಯುವಕರಿಗೆ ಇವರ ಈ ಕೃಷಿ ಪ್ರೇಮ ಮಾದರಿಯಾಗಿದೆ.
ದೇಶದೆಲ್ಲೆಡೆ ಕೊರೊನಾ ಮಹಾಮಾರಿ ಪ್ರಕರಣಗಳು ಹೆಚ್ಚಾದ ಕಾರಣಕ್ಕಾಗಿ ದೇಶದಲ್ಲಿ ಮತ್ತೆ ಲಾಕ್ಡೌನ್ ಜಾರಿಗೆ ಬಂದಿದೆ. ಈ ಸಂದರ್ಭದಲ್ಲಿ ಜನ ಉದ್ಯೋಗ ನಿಮಿತ್ತ ಕಚೇರಿಗೆ ಹೋಗಲಾಗದೆ, ಮನೆಯಲ್ಲೇ ಇದ್ದು ತಮಗೆ ಇಷ್ಟ ಬಂದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಹೀಗೆಯೇ ಊರಿಗೆ ಬಂದಿರುವ ದೇಶದ ಉನ್ನತ ಹಾಗೂ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿರುವ ಸುಪ್ರೀಂಕೋರ್ಟ್ನ ಹೆಚ್ಚುವರಿ ಸಾಲಿಟರ್ ಜನರಲ್ ಕೆ.ಎಂ.ನಟರಾಜ್ ಇದೀಗ ಮನೆಯಿಂದಲೇ ಕಛೇರಿ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ತನ್ನನ್ನು ಬೆಳೆಸಿದ ಕೃಷಿಯಲ್ಲೂ ಮಗ್ನರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ನಿವಾಸಿ ಕೆ.ಎಂ. ನಟರಾಜ್ ಕೃಷಿ ಕುಟುಂಬದಿಂದ ಬಂದವರು. ಇವರ ಇಡೀ ಕುಟುಂಬ ಕೃಷಿಯನ್ನೇ ನೆಚ್ಚಿಕೊಂಡು ಬಂದಿದ್ದು, ಈ ಕೃಷಿ ಪ್ರೇಮ ನಟರಾಜ್ ಅವರನ್ನು ಇಂದಿಗೂ ಬಿಟ್ಟಿಲ್ಲ.
ದೆಹಲಿಯಲ್ಲಿ ಸುಪ್ರೀಂಕೋರ್ಟ್ನ ಕಲಾಪಗಳಲ್ಲಿ ವರ್ಷಪೂರ್ತಿ ಬ್ಯುಸಿಯಾಗಿರುವ ನಟರಾಜ್ ಕೆಲವು ದಿನಗಳ ಮಟ್ಟಿಗೆ ಊರಿಗೆ ಬಂದರೂ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಲಾಕ್ಡೌನ್ ದೇಶದೆಲ್ಲೆಡೆ ಹೇರಿಕೆಯಾದ ಕಾರಣ, ನಟರಾಜ್ ದೆಹಲಿಯಿಂದ ನೇರವಾಗಿ ಊರಿಗೆ ಬಂದಿದ್ದಾರೆ. ಮನೆಯಿಂದಲೇ ಕೋರ್ಟ್ನ ತನ್ನ ಕೆಲಸವನ್ನು ನಿರ್ವಹಿಸುತ್ತಿರುವ ಇವರು ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.