ಪುತ್ತೂರು :ಇಲ್ಲಿನ ಕಾರಣಿಕ ಕ್ಷೇತ್ರ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಪ್ರತಿ ವರ್ಷ ಮೀನ ಸಂಕ್ರಮಣದಂದು ಸೂರ್ಯನ ರಶ್ಮಿಯು ಸ್ಪರ್ಷಿಸುತ್ತದೆ.
ಇದೇ ರೀತಿ ಇಂದು ಕೂಡ (ಮಾ.14ರ) ಮೀನ ಸಂಕ್ರಮಣದಂದು ಮುಂಜಾನೆ ಸೂರ್ಯ ರಶ್ಮಿಯ ಸ್ಪರ್ಶವಾಯಿತು. ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆಯೂ ನೆರವೇರಿತು.
ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮಿಗೆ ಸೂರ್ಯರಶ್ಮಿಯ ಸ್ಪರ್ಶ.. ಬೆಳಗ್ಗೆ 7ಗಂಟೆಯಿಂದ 7.30ರ ಸಮಯದಲ್ಲಿ ಕ್ಷೇತ್ರದ ಮೂರು ಬಾಗಿಲುಗಳನ್ನು ದಾಟಿ ಬರುವ ಸೂರ್ಯನ ಕಿರಣಗಳು ಗರ್ಭಗುಡಿಯಲ್ಲಿ ನೆಲೆಯಾಗಿರುವ ಮಹಾಲಕ್ಷ್ಮೀಯ ಬಿಂಬದ ಮೇಲೆ ಸ್ಪರ್ಶಿಸಿದೆ.
ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿ ಐತ್ತಪ್ಪ ಸವಲ್ಯರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ವೈದಿಕರಿಂದ ವೇದ, ಘೋಷ ಮಂತ್ರಗಳ ಮೊಳಗಿತು. ನೂರಾರು ಮಂದಿ ಭಕ್ತಾದಿಗಳು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡು ಪುನೀತರಾದರು.
ಶ್ರೀ ಮಹಾಲಕ್ಷ್ಮೀ ದೇವಿಯ ಬಿಂಬಕ್ಕೆ ಸೂರ್ಯ ರಶ್ಮಿ ವರ್ಷದ ಕೊನೆಯ ಮಾಸವಾಗಿರುವ ಮೀನ ಸಂಕ್ರಮಣದಂದು ಸೂರ್ಯ ತನ್ನ ಪಥ ಬದಲಿಸುವ ಮಹತ್ವದ ಘಟ್ಟ. ಈ ಸಮಯದಲ್ಲಿ ಸೂರ್ಯನ ರಶ್ಮಿ ದೇವಳದ ಗರ್ಭಗುಡಿಗೆ ಸ್ಪರ್ಶಿಸುವ ಪುಣ್ಯದಿನವಾಗಿದೆ.
ಮೀನ ಸಂಕ್ರಮಣದ ದಿನ ಗರ್ಭಗುಡಿಯಲ್ಲಿ ನೆಲೆಸಿರುವ ದೇವಿಯ ಬಿಂಬಕ್ಕೆ ಸೂರ್ಯನಕಿರಣಗಳು ಸ್ಪರ್ಶಿಸುವ ರಾಜ್ಯದ ಏಕೈಕ ದೇವಸ್ಥಾನ ಇದಾಗಿದೆ. ಬೆಂಗಳೂರಿನ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ದಿನ ಸಂಜೆಯ ವೇಳೆಗೆ ಸೂರ್ಯನ ರಶ್ಮಿಯು ಬಿಂಬವನ್ನು ಸ್ಪರ್ಶಿಸುತ್ತದೆ.
ಓದಿ:ಸಕ್ಕರೆನಾಡಲ್ಲಿ ಇಂದು ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವ