ಸುಳ್ಯ:ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸುಳ್ಯ: ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಸಭೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಂತಿಕಲ್ಲಿನಲ್ಲಿ ವಿದ್ಯುತ್ ತಂತಿ ರಸ್ತೆಗೆ ಬಾಗಿದ ಪರಿಣಾಮ ಅವಘಡ ಸಂಭವಿಸಿ ಬೈಕ್ ಸವಾರ ಸಜೀವ ದಹನನಾಗಿದ್ದಾನೆ. ಘಟನೆ ನಡೆದ ಸಂದರ್ಭದಲ್ಲೇ ಸುಮಾರು 35 ಜನರಿದ್ದ ಬಸ್ ಅದೇ ರಸ್ತೆ ಮೂಲಕ ಬಂದಿದೆ. ಇದರಿಂದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ನಿಂತಿಕಲ್ಲಿನಲ್ಲಿ ನಡೆದ ಘಟನೆ ತಾಲೂಕಿನ ಯಾವ ಕಡೆಯು ನಡೆಯಬಾರದು. ಈ ಕಾರಣದಿಂದ ಎಲ್ಲಾ ಹೆಚ್‌ಪಿ ವಿದ್ಯುತ್ ತಂತಿಗಳ ಪರಿಶೀಲನೆ ಅಗತ್ಯವಿದೆ. ಕೂಡಲೇ ಪರಿಶೀಲನೆ ನಡೆಸಬೇಕು ಎಂದು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಾಹ್ನವಿ ಕಾಂಚೋಡು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಮೆಸ್ಕಾಂ ಜೆಇ, ವಿದ್ಯುತ್ ತಂತಿ ಕೆಳಕ್ಕೆ ಜಾರಿದ ಪರಿಣಾಮ ದುರಂತ ಸಂಭವಿಸಿದೆ. ಅಲ್ಲದೆ ಈ ಮಳೆಗಾಲದಲ್ಲಿ ಈವರೆಗೆ ಸುಮಾರು 740 ವಿದ್ಯುತ್ ಕಂಬಗಳು ನಾಶವಾಗಿ ಒಂದೂವರೆ ಕೋಟಿ ನಷ್ಟ ಸಂಭವಿಸಿದೆ. ಇದರಿಂದ ಈ ಹಿಂದಿನ ಕೆಲಸಗಳು ಬಾಕಿ ಆಗಿವೆ. ಮಳೆಗಾಲ ಕಳೆದ ತಕ್ಷಣ ಕಾಮಗಾರಿಗಳು ಆರಂಭವಾಗಲಿವೆ. ಸೌಭಾಗ್ಯ ಯೋಜನೆಯಡಿ ಆಲೆಟ್ಟಿ ಗ್ರಾಮದ ಮಾಣಿಮರ್ದ್ ಎಂಬಲ್ಲಿ 20 ಕುಟುಂಬಗಳಿಗೆ ಸೋಲಾರ್ ಅಳವಡಿಸಲಾಗಿದೆ ಎಂದರು.
ಕೊಲ್ಲಮೊಗ್ರ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆರೆ ಹಾವಳಿಯಾಗುವ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪನ್ನೆ ಎಂಬಲ್ಲಿ ಸರ್ಕಾರಿ ಜಮೀನನ್ನು ನಿವೇಶನಕ್ಕೆ ಜಂಟಿ ಸರ್ವೇ ನಡೆಸಿ ಮಂಜೂರು ಮಾಡಲಾಗಿದೆ. ಆದರೆ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದ ಇದಕ್ಕೆ ತಡೆ ಉಂಟಾಗಿದೆ. ಮಾನವೀಯ ನೆಲೆಯಲ್ಲಿ ಅರಣ್ಯ ಇಲಾಖೆ ವರದಿ ನೀಡಬೇಕು ಎಂದು ಅಧ್ಯಕ್ಷರು ಹೇಳಿದರು.