ಕರ್ನಾಟಕ

karnataka

ETV Bharat / state

ಕೊನೆಗೂ ತನ್ನ ಮರಿಗಳೊಂದಿಗೆ ಸೇರಿದ ಶ್ವಾನ: ಇದರ ಹಿಂದಿದೆ ಒಂದು ಮನುಷ್ಯತ್ವದ ಕಥೆ..!

ಕಾರಿನ ಬಂಪರ್ ಒಳಗೆ ಸಿಲುಕಿ 70 ಕಿಲೋ ಮೀಟರ್ ಪ್ರಯಾಣ ಮಾಡಿದ್ದ ಶ್ವಾನ - ಮರಳಿ ಮರಿಗಳನ್ನು ಸೇರಿದ ನಾಯಿ - ಪುಟ್ಟ ಮಗಳ ಒತ್ತಾಯಕ್ಕೆ ಮಣಿದು ಶ್ವಾನವನ್ನ ಮರಿಗಳೊಂದಿಗೆ ಒಂದು ಮಾಡಿದ ತಂದೆ - ಫೆಬ್ರವರಿ 3ರಂದು ಸುಳ್ಯದ ಬಳ್ಪ ಎಂಬಲ್ಲಿ ನಡೆದ ಅಪಘಾತ

sullia-forest-officer-brought-joy-to-the-little-daughter
ಕೊನೆಗೂ ತನ್ನ ಮರಿಗಳೊಂದಿಗೆ ಸೇರಿದ ಶ್ವಾನ

By

Published : Feb 6, 2023, 10:35 PM IST

ಕೊನೆಗೂ ತನ್ನ ಮರಿಗಳೊಂದಿಗೆ ಸೇರಿದ ಶ್ವಾನ, ಇದರ ಹಿಂದೆ ಇದೆ ಒಂದು ಮನುಷ್ಯತ್ವದ ಕಥೆ

ಸುಳ್ಯ(ದಕ್ಷಿಣ ಕನ್ನಡ):ಜಿಲ್ಲೆಯ ಪುತ್ತೂರಿನಲ್ಲಿ ಕಾರಿನ ಬಂಪರ್ ಒಳಗೆ ಸಿಲುಕಿ 70 ಕಿಲೋಮೀಟರ್ ಸಾಗಿ ಬದುಕಿ ಬಂದ ಶ್ವಾನವೊಂದರ ಸುದ್ದಿಯೊಂದು ಇತ್ತೀಚಿಗೆ ಭಾರೀ ವೈರಲ್ ಆಗಿತ್ತು. ತನ್ನ ಮರಿಗಳಿಂದ ಬೇರ್ಪಟ್ಟ ಆ ಶ್ವಾನವನ್ನು ಹೇಗಾದರೂ ಮಾಡಿ ಮತ್ತೆ ಮರಿಗಳೊಂದಿಗೆ ಸೇರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಜನರೂ ಆಗ್ರಹಿಸಿದ್ದರು. ಇದೀಗ ಈ ಶ್ವಾನ ಅದರ ಮನೆಗೆ ಸೇರಿದೆ. ಇದರ ಹಿಂದೆ ಇನ್ನೊಂದು ಅವಿನಾಭಾವ ಸಂಬಂಧದ ಕಥೆಯೂ ಇದೆ.

ಸುಳ್ಯ ಸಮೀಪದ ಬಳ್ಪ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಸಂತೋಷ್ ರೈಯವರು ವಾಸವಿದ್ದ ಅರಣ್ಯ ಇಲಾಖೆಗೆ ಸಂಬಂಧಪಟ್ಟ ವಸತಿಗೃಹಕ್ಕೆ ಈ ಶ್ವಾನವು ನಿತ್ಯ ಬರ್ತಾ ಇತ್ತು. ಅದಕ್ಕೆ ಸಂತೋಷ್ ರೈ ಮತ್ತು ಅವರ ಪುಟ್ಟ ಮಗಳು ಸಾನ್ವಿ ನಿತ್ಯ ಆಹಾರವನ್ನೂ ಹಾಕುತ್ತಿದ್ದರು. ಈ ನಾಯಿಗೆ ಪುಟ್ಟ ಮರಿಗಳೂ ಇದ್ದವು.

ಮತ್ತೆ ಬಳ್ಪಕ್ಕೆ ಕರೆತಂದ ಅರಣ್ಯಧಿಕಾರಿ

ಈ ನಡುವೆ ರಸ್ತೆಯಲ್ಲಿ ಕಾರು ಅಫಘಾತವಾಗಿ ಕಾರಿನ ಬಂಪರ್ ಒಳಗೆ ಸೇರಿದ ಶ್ವಾನವು 70 ಕಿ.ಮೀ ದೂರದ ಪುತ್ತೂರು ಸೇರಿತ್ತು. ಈ ಶ್ವಾನವನ್ನು ತಂದು ಮರಿಗಳೊಂದಿಗೆ ಸೇರಿಸುವಂತೆ ತಂದೆ ಸಂತೋಷ್ ಅವರಲ್ಲಿ ಮಗಳು ಸಾನ್ವಿ ಪಟ್ಟು ಹಿಡಿದಿದ್ದಳು. ಮಗಳ ಹಠಕ್ಕೆ ಜೋತು ಬಿದ್ದು ಶ್ವಾನಕ್ಕಾಗಿ ಸಂತೋಷ್ ಅವರು ಪುತ್ತೂರಿನ ತಮ್ಮ ಪರಿಚಯದವರೊಂದಿಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಶ್ವಾನವು ಪುತ್ತೂರಿನ ಮನೆಯೊಂದರ ಬಳಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.

ತಕ್ಷಣವೇ ಪುತ್ತೂರಿಗೆ ತೆರಳಿದ ಸಂತೋಷ್ ರೈ ಗೆ ಶ್ವಾನ ಸಿಗದ ಕಾರಣ ಪುತ್ತೂರಿನ ನಗರದಾದ್ಯಂತ ಶ್ವಾನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೂ ಹುಡುಕಾಟದ ಬಳಿಕ ಶ್ವಾನ ಪತ್ತೆಯಾಗಿದೆ. ಶ್ವಾನವನ್ನು ಕಾರಿನಲ್ಲಿ ವಾಪಸ್​ ಕರೆತಂದು ಅದರ ಮರಿಗಳ ಜೊತೆ ಸೇರಿಸಿದ್ದಾರೆ. ಇತ್ತ ಶ್ವಾನವು ತನ್ನ ಪುಟ್ಟ ಮರಿಗಳನ್ನು ಸೇರಿದ್ದಕ್ಕೆ ಮತ್ತು ಸಂತೋಷ್ ಅವರ ಪುಟ್ಟ ಮಗಳು ಸಾನ್ವಿ ಫುಲ್​ ಖುಷ್ ಆಗಿದ್ದಾರೆ.

ಫೆಬ್ರವರಿ 3ರಂದು ನಡೆದ ಅಪಘಾತ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ವಾಪಸ್​ ಆಗುತ್ತಿದ್ದ ವೇಳೆ ಬಳ್ಪ ಎಂಬಲ್ಲಿ ನಾಯಿಯೊಂದು ಕಾರಿಗೆ ಡಿಕ್ಕಿಯಾಗಿತ್ತು. ಸುಬ್ರಹ್ಮಣ್ಯ ದಂಪತಿ ಅಪಘಾತ ಆದ ಕೂಡಲೇ ಕಾರು ನಿಲ್ಲಿಸಿ ನಾಯಿಯನ್ನು ಹುಡಿಕಿದ್ದಾರೆ. ಆದರೆ, ಶ್ವಾನ ಕಂಡು ಬರದ ಕಾರಣ, ಗುದ್ದಿದ ನೋವಿಗೆ ಓಡಿ ಹೋಗಿರಬೇಕು ಎಂದು ಭಾವಿಸಿ ಅಲ್ಲಿಂದ ಹೊರಡುತ್ತಾರೆ.

ಮತ್ತೆ ಬಳ್ಪಕ್ಕೆ ಕರೆತಂದ ಅರಣ್ಯಧಿಕಾರಿ

ಅಲ್ಲಿಂದ ಮನೆಗೆ ತಲುಪಿದಾಗ ಕಾರಿನ ಗ್ರಿಲ್​ ತುಂಡಾಗಿರುವುದು ಗಮನಕ್ಕೆ ಬಂದಿದೆ. ಇದನ್ನು ಪರಿಶೀಲಿಸಿದಾಗ ಕಾರಿನ ಬಂಪರ್​ ನಡುವೆ ನಾಯಿ ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿತ್ತು. ನಾಯಿಯನ್ನು ಮನೆಯವರಿಗೆ ಹೊರ ತೆಗೆಯಲಾಗದೇ ಗ್ಯಾರೇಜ್​ಗೆ ಕಾರನ್ನು ತೆಗೆದುಕೊಂಡು ಹೋಗಿ ಬಂಪರ್​ ತೆಗೆಸಿ ಶ್ವಾನವನ್ನು ಬಿಡಿಸಲಾಗಿತ್ತು.

70 ಕಿಲೋ ಮೀಟರ್ ಬಂಪರ್​ನಲ್ಲೇ ಶ್ವಾನ ಪ್ರಯಾಣ ಮಾಡಿತ್ತು. ಸುಬ್ರಹ್ಮಣ್ಯ ದಂಪತಿ ನಾಯಿಯನ್ನು ಪುತ್ತೂರಿನಲ್ಲೇ ಬಿಟ್ಟಿದ್ದರು. ಆದರೆ ಸುಳ್ಯ ಸಮೀಪದ ಬಳ್ಪ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಸಂತೋಷ್ ರೈ ಮಗಳ ಒತ್ತಾಯಕ್ಕೆ ಮಣಿದು ಶ್ವಾನ ಮತ್ತು ಮರಿಯನ್ನು ಒಟ್ಟುಗೂಡಿಸಿದ್ದಾರೆ.

ಇದನ್ನೂ ಓದಿ:ಪುತ್ತೂರು: ಕಾರ್‌ಗೆ ಡಿಕ್ಕಿಯಾಗಿ ಬಂಪರ್‌ ಸೇರಿಕೊಂಡ ನಾಯಿ; 70 ಕಿ.ಮೀ ಪಯಣ!

ABOUT THE AUTHOR

...view details