ಮಂಗಳೂರು: ನವಜಾತ ಶಿಶುವಿನ ಅಂಗಾಂಗದಲ್ಲಿ ದೋಷಗಳು ಕಂಡುಬಂದರೆ ಭಾರಿ ಪ್ರಯಾಸದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಇಂತಹ ಒಂದು ಅಪರೂಪದ ಶಸ್ತ್ರಚಿಕಿತ್ಸೆ ಮಂಗಳೂರಿನಲ್ಲಿ ಯಶಸ್ವಿಯಾಗಿ ನಡೆದಿದೆ. 24 ದಿನದ ಗಂಡುಮಗು ಸ್ತನ್ಯಪಾನ ಮಾಡುವಾಗ ತೊಂದರೆ ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದು, ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಗು ಉಸಿರಾಡಲು ಕಷ್ಟಪಡುತ್ತಾ ಶ್ವಾಸೋಚ್ಚಾಸ ಮಾಡುವಾಗ, ಎದೆಹಾಲು ಕುಡಿಯುವಾಗ ಮೈ ನೀಲಿ ವರ್ಣಕ್ಕೆ ತಿರುಗುತಿತ್ತು.
ಮಗುವನ್ನು ಇಸಿಜಿ ಮೂಲಕ ಪರೀಕ್ಷಿಸಿದಾಗ ಹೃದಯದಿಂದ ಅಶುದ್ದ ರಕ್ತವನ್ನು ಶ್ವಾಸಕೋಶಗಳಿಗೆ ಕಳುಹಿಸುವ ಪಲ್ಮನರಿ ರಕ್ತನಾಳಗಳ ಒತ್ತಡ ತೀವ್ರವಾಗಿರುವುದು ಕಂಡುಬಂದಿದೆ. ಇಎನ್ಟಿ ಚಿಕಿತ್ಸಕ ಡಾ.ಗೌತಮ್ ಕುಳವರ್ಮ ಅವರು ಶಿಶುವಿನ ಮೂಗಿನಿಂದ ಶ್ವಾಸನಾಳದವರೆಗೆ ಉಸಿರಾಟದ ದಾರಿಯಲ್ಲಿ ತೊಂದರೆಗಳೇನಾದರೂ ಇವೆಯೇ ಎಂದು ಪರೀಕ್ಷಿಸಿದ್ದಾರೆ. ಅತ್ಯಾಧುನಿಕ ವಿಡಿಯೋ ಎಂಡೋಸ್ಕೋಪಿ ಮೂಲಕ ನೋಡಿದಾಗ ನಾಲಿಗೆಯ ಬುಡದ ಶ್ವಾಸನಾಳದ ಪ್ರವೇಶದ್ವಾರದಲ್ಲಿ ಒಂದು ಸಿಸ್ಟ್ (ನೀರ್ಗುಳ್ಳೆ) ಇರುವುದು ಕಂಡುಬಂದಿದೆ. ಇದನ್ನು ಎಂಆರ್ಐ ಸ್ಕ್ಯಾನಿಂಗ್ ಮೂಲಕ ಖಚಿತಪಡಿಸಿದ್ದಾರೆ.