ಕರ್ನಾಟಕ

karnataka

ETV Bharat / state

ಯೆನೆಪೋಯ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಮೂತ್ರಪಿಂಡ ಕಸಿ

ಹೃದಯದ ಸಮಸ್ಯೆ, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 23 ವರ್ಷದ ಯುವತಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನ‌ ವೈದ್ಯರ ತಂಡ, ಯಶಸ್ವಿ ಮೂತ್ರಪಿಂಡ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

Yenepoya Hospital Doctors
ಮೂತ್ರಪಿಂಡ ಕಸಿ ಕುರಿತು ಮಾಹಿತಿ ನೀಡಿದ ವೈದ್ಯ

By

Published : Jan 20, 2022, 6:51 AM IST

ಮಂಗಳೂರು: ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಬಂಟ್ವಾಳ ಮೂಲದ ಯುವತಿಯೊಬ್ಬಳಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಹೃದಯದ ಸಮಸ್ಯೆ, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 23 ವರ್ಷದ ಯುವತಿಗೆ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನ‌ ವೈದ್ಯರ ತಂಡ, ಯಶಸ್ವಿ ಮೂತ್ರಪಿಂಡ ಕಸಿ ಮಾಡಿದೆ. ಯುವತಿ ಶೀಘ್ರವಾಗಿ ಯಥಾಸ್ಥಿತಿಗೆ ಮರಳಿದ್ದು, ತನ್ನ ದೈನಂದಿನ ಕೆಲಸ ಮಾಡುವಷ್ಟು ಶಕ್ತರಾಳಾಗಿದ್ದಾಳೆ ಎಂದು ವೈದ್ಯರ ತಂಡ ಹರ್ಷ ವ್ಯಕ್ತಪಡಿಸಿದೆ.

ಸ್ನಾತಕೋತ್ತರ ಪದವಿ ಮುಗಿಸಿರುವ 23 ವರ್ಷದ ಈ ಯುವತಿ, ನಗರದ ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಮನೆಗೆ ಆಧಾರ ಸ್ತಂಭವಾಗಿದ್ದ ಯುವತಿಗೆ ಕೆಲ ತಿಂಗಳ ಹಿಂದೆ ಏಕಾಏಕಿ ಅನಾರೋಗ್ಯ ಸಮಸ್ಯೆ ಕಾಡಲಾರಂಭಿಸಿದೆ.

ಉಸಿರಾಟದ ತೊಂದರೆ, ಹೃದಯ ಸಮಸ್ಯೆ, ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಂಡಿತ್ತು. ರಕ್ತ ಹೆಪ್ಪುಗಟ್ಟಿ ಡಯಾಲಿಸೀಸ್ ಮಾಡುವುದು ಕಷ್ಟಕರವಾಗಿತ್ತು. ಆಕೆ ಅನೇಕ ಮೂತ್ರಪಿಂಡ ಕಸಿ ಕೇಂದ್ರಗಳಿಗೆ ಭೇಟಿ ನೀಡಿದ್ದರೂ ಕೂಡ ಹೃದಯ ಹಾಗೂ ರಕ್ತದ ಅಸ್ವಸ್ಥತೆ ಹಿನ್ನೆಲೆ ಮೂತ್ರಪಿಂಡ ಕಸಿ ಮಾಡಲು ಯಾರೂ ಒಪ್ಪಿರಲಿಲ್ಲ.

ಮೂತ್ರಪಿಂಡ ಕಸಿ ಕುರಿತು ಮಾಹಿತಿ ನೀಡಿದ ವೈದ್ಯ

ಬದುಕುಳಿಯುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿದ್ದ ಯುವತಿಗೆ ಯೆನೆಪೋಯ ವೈದ್ಯಕೀಯ ಆಸ್ಪತ್ರೆಯ ನೆಫ್ರಾಲಜಿಸ್ಟ್​ಗಳು, ಮೂತ್ರಶಾಸ್ತ್ರಜ್ಞರು, ಹೃದಯ ರೋಗ ತಜ್ಞರು, ಕಾರ್ಡಿಯೋಥೊರಾಸಿಕ್ ಸರ್ಜನ್ ಮತ್ತು ಅರಿವಳಿಕೆ ತಜ್ಞರು ಸೇರಿದಂತೆ ವೈದ್ಯರ ತಂಡ ತಪಾಸಣೆ ಮಾಡಿ, ಬಳಿಕ ಮೂತ್ರಪಿಂಡ ಕಸಿ ಮಾಡುವ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದಾರೆ.

ಆಕೆಯ ತಾಯಿಯೇ ಮೂತ್ರಪಿಂಡ ದಾನ ಮಾಡಲು ಮುಂದೆ ಬಂದಿದ್ದು, ಯಶಸ್ವಿ ಕಸಿ ಬಳಿಕ ಆಕೆ ಮೂತ್ರಪಿಂಡ, ಹೃದಯ ಹಾಗೂ ಹೆಮಟೊಲಾಜಿಕಲ್ ಸಮಸ್ಯೆಯಿಂದ ‌ಮುಕ್ತಳಾಗಿದ್ದಾಳೆ. ಮೂತ್ರಪಿಂಡ ಕಸಿ ನಡೆಸಿದ ಎರಡು ವಾರಗಳಲ್ಲಿಯೇ ಆಕೆ ಯಥಾಸ್ಥಿತಿಗೆ ಬಂದಿದ್ದು, ಮೂರು ತಿಂಗಳಲ್ಲೇ ‌ಕೆಲಸಕ್ಕೂ ಹೋಗಲು ಆರಂಭಿಸಿದ್ದಾಳೆ. ಕಿಡ್ನಿ ದಾನ ಮಾಡಿರುವ ಆಕೆಯ ತಾಯಿಯೂ ವಾರದಲ್ಲಿಯೇ ಚೇತರಿಸಿಕೊಂಡಿದ್ದು, ಕೆಲಸ‌ ಮಾಡುವಷ್ಟು ಶಕ್ತರಾಗಿದ್ದಾರೆ‌.

ಎರಡು ಕಿಡ್ನಿ ವೈಫಲ್ಯಗೊಂಡವರು ಬದುಕಬೇಕೆಂದರೆ ಡಯಾಲಿಸೀಸ್ ಅಥವಾ ಮೂತ್ರಪಿಂಡ ಕಸಿ ಮಾಡುವುದಷ್ಟೇ ಪರಿಹಾರ. ಸಾಮಾನ್ಯವಾಗಿ ಹಿಮೋ ಡಯಾಲಿಸೀಸ್ ಮಾಡಲಾಗುತ್ತದೆ. ರೋಗಿ ವಾರಕ್ಕೆ ಮೂರು ದಿವಸ ಆಸ್ಪತ್ರೆಗೆ ಬಂದು ಮಷಿನ್ ಬಳಿ ನಾಲ್ಕು ಗಂಟೆಗಳ ಕಾಲ ಮಲಗಿ ಸಂಪೂರ್ಣ ನೀರು ತೆಗೆದು ರಕ್ತಸಂಚಲನ ಆಗಬೇಕೆಂದರೆ ಸುಸ್ತು, ನಿತ್ರಾಣ ಕಾಣಿಸಿಕೊಳ್ಳುತ್ತದೆ‌.


ಜೊತೆಗೆ ಇದು ಜೀವನ ಪರ್ಯಂತ ಅಂತ್ಯವಿಲ್ಲದ ಪ್ರಕ್ರಿಯೆ‌ಯಾಗಿರುತ್ತದೆ. ಆದರೆ ಮೂತ್ರಪಿಂಡ ಕಸಿ ಪ್ರಕ್ರಿಯೆ ಯಶಸ್ವಿಯಾದರೆ ಎಲ್ಲರಂತೆ ಜೀವನ ನಡೆಸಲು ಸಾಧ್ಯ ಎಂದು ಯೆನೆಪೋಯ ಆಸ್ಪತ್ರೆಯ ನೆಫ್ರಾಲಜಿ ಎಚ್ಒಡಿ ಹಾಗೂ ಪ್ರೊಫೆಸರ್ ಡಾ.ಸಂತೋಷ್ ಪೈ ಹೇಳುತ್ತಾರೆ.

ಮೂತ್ರಶಾಸ್ತ್ರಜ್ಞರಾದ ಡಾ.ಮುಜಿಬುರಹಿಮಾನ್, ಡಾ.ಅಲ್ತಾಫ್ ಖಾನ್, ಡಾ.ನಿಶ್ಚಿತ್, ನೆಫ್ರಾಲಜಿಸ್ಟ್ ಗಳಾದ ಡಾ.ಸಂತೋಷ್ ಪೈ, ಡಾ.ಹೈಸಮ್, ಡಾ.ತಿಪ್ಪೇಸ್ವಾಮಿ, ಡಾ.ಐಜಾಜ್ ಅವರನ್ನೊಳಗೊಂಡ ಅರಿವಳಿಕೆ ತಜ್ಞರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ABOUT THE AUTHOR

...view details