ಸುಬ್ರಹ್ಮಣ್ಯ(ಮಂಗಳೂರು): ಕೊರೊನಾ ಲಾಕ್ಡೌನ್ ನಂತರ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆಯಿಂದಲೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೊರೊನಾ ಸೋಂಕು ಹರಡಂತೆ ಸುರಕ್ಷತಾ ಕ್ರಮಗಳೊಂದಿಗೆ ಭಕ್ತಾದಿಗಳಿಗೆ ದೇವಸ್ಥಾನಕ್ಕೆ ಪ್ರವೇಶ ಮತ್ತು ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ರಾಜ್ಯದ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಬೆಳಗ್ಗೆ 8:30ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಸಂಜೆ 5:30 ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಪ್ರವೇಶಕ್ಕೆ ಮುನ್ನ ಕಡ್ಡಾಯವಾಗಿ ಜ್ವರ ಪರೀಕ್ಷೆ, ಸ್ಯಾನಿಟೈಸರ್ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಹಿತದೃಷ್ಟಿಯಿಂದ ಅಲ್ಲಲ್ಲಿ ಹೆಲ್ಪ್ ಡೆಸ್ಕ್ಗಳನ್ನು ಹಾಕಲಾಗಿದೆ.
ಭಕ್ತರಿಗೆ ಸುಬ್ರಹ್ಮಣ್ಯನ ದರ್ಶನ ಭಾಗ್ಯ ಈ ನಡುವೆ ದೇವಸ್ಥಾನದಲ್ಲಿ ಹಿಂದೆ ನಡೆಯುತ್ತಿದ್ದ ತ್ರಿಕಾಲ ಪೂಜೆಯ ವಿಚಾರದಲ್ಲಿ ಸ್ವಲ್ಪ ಮಟ್ಟದಲ್ಲಿ ಗೊಂದಲ ಏರ್ಪಾಡಾಗಿತ್ತು. ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ತ್ರಿಕಾಲ ಪೂಜಾ ವಿಷಯದಲ್ಲಿ ಸಮಸ್ಯೆ ಉಂಟಾಗಬಾರದೆಂದು ಭಕ್ತರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ದೇವಸ್ಥಾನದ ಆಡಳಿತ ಅಧಿಕಾರಿಗಳಿಗೆ ಮನವಿ ಮಾಡಿದರು. ನಂತರ ದೇವಸ್ಥಾನದ ಆಡಳಿತ ಮಂಡಳಿ ಅರ್ಚಕರನ್ನು ಕರೆಸಿ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಮಾತ್ರವಲ್ಲದೆ ಈ ಹಿಂದೆ ತ್ರಿಕಾಲ ಪೂಜೆ ನಡೆಯುತ್ತಿದ್ದ ರೀತಿಯಲ್ಲಿಯೇ ಪೂಜೆ ನಡೆಸುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದಾರೆ.
ಸ್ಥಳದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ರೂಪಾ ಎಂ.ಜೆ, ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಎಂ.ಎಚ್, ಸೇರಿದಂತೆ ಅಧಿಕಾರಿಗಳ ಹಾಗೂ ಸಿಬ್ಬಂದಿ ತಂಡವು ಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.