ಬಂಟ್ವಾಳ: ಇಂದು ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಗೆ ತಾಲೂಕಿನಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಸಹಿತ ನಾನಾ ಇಲಾಖೆಗಳು ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ತಗೆದುಕೊಂಡಿದೆ.
ಬೆಳಗ್ಗೆಯೇ ತಾಲೂಕಿನ 17 ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿದರು. ಮಾರ್ಕ್ ಮಾಡಿದ ಜಾಗದಲ್ಲಿ ನಿಂತು ಸಾಲಾಗಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಲಾಯಿತು. ಮುಡಿಪು, ಮೊಂಟೆಪದವು ಪರೀಕ್ಷಾ ಕೇಂದ್ರಕ್ಕೆ ಶಾಸಕ ಯು.ಟಿ. ಖಾದರ್ ಸಲಹೆಯಂತೆ ಸೂರಜ್ ಶಿಕ್ಷಣ ಸಂಸ್ಥೆ ಮತ್ತು ಅಲ್ ಮದೀನಾ ಶಿಕ್ಷಣ ಸಂಸ್ಥೆ ತಲಾ ಒಂದರಂತೆ ಉಚಿತ ಬಸ್ ಸೌಲಭ್ಯ ಒದಗಿಸಿದೆ.
ಥರ್ಮಲ್ ಟೆಸ್ಟ್ ಮಾಡಿಸಿಕೊಳ್ಳುವ ಮೂಲಕ ಎಸ್ಎಸ್ಎಲ್ಸಿ ಪರೀಕ್ಷಾ ಹಾಲ್ಗೆ ತೆರಳಿದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸೂಚನೆಯಂತೆ ಅರಳ ಜನಹಿತಾಯ ಶಿಕ್ಷಣ ಸಂಸ್ಥೆಯ 4, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ 10, ದಡ್ಡಲಕಾಡು ಶ್ರೀ ದುರ್ಗಾ ಚಾರೀಟೇಬಲ್ ಸಂಸ್ಥೆಯ 4, ಪಚ್ಚಿನಡ್ಕ ಶುಭಲಕ್ಷ್ಮೀ ಟ್ರಾವೆಲ್ಸ್ 4, ಸಜೀಪಮೂಡ ವೃಷಭ ಟ್ರಾವೆಲ್ಸ್ 4 ಬಸ್ಗಳನ್ನು ಒದಗಿಸಿವೆ. ಉಡುಪಿ ಜಿ.ಶಂಕರ್ ಪ್ರತಿಷ್ಠಾನ ಮತ್ತು ಜಿಲ್ಲಾ ಸ್ಕ್ವೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ತಲಾ 2 ರಂತೆ ಉಚಿತ ಮಾಸ್ಕ್ ವಿತರಿಸಲಾಯಿತು.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಹಕರಿಸಿದೆ. ಹಾಗೆಯೇ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದು, ಮಕ್ಕಳು ಅಂತರವನ್ನು ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ತಿಳಿಸಿದ್ದಾರೆ.