ಮಂಗಳೂರು: ನಗರದ ಕೊಕ್ಕಡ ಪ್ರೌಢ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಮಾರ್ಗಸೂಚಿ ಉಲ್ಲಂಘಿಸಿ ನೂತನ ಮಸೀದಿ ಉದ್ಘಾಟನಾ ಸಮಾರಂಭಕ್ಕೆ ಕರೆದುಕೊಂಡು ಹೋಗಿರುವ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ಅವರನ್ನು 10 ದಿನಗಳ ಕಾಲ ರಜೆಯ ಮೇಲೆ ತೆರಳಬೇಕೆಂದು ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.
ಈ ಬಗ್ಗೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣಾ ವರದಿ ಬಂದ ಬಳಿಕವೇ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಮುತ್ತಪ್ಪ ರೈ ಪುತ್ರ ಹಾಗೂ ಸಹಚರರಿಂದ ಕೊಲೆ ಬೆದರಿಕೆ: ಪೊಲೀಸ್ ರಕ್ಷಣೆಗೆ ರಾಕೇಶ್ ಮಲ್ಲಿ ದೂರು
ಇತ್ತೀಚೆಗೆ ಕೊಕ್ಕಡ ಗ್ರಾಮದಲ್ಲಿ ನೂತನ ನಿರ್ಮಾಣವಾದ ಮಸೀದಿ ಉದ್ಘಾಟನಾ ಸಮಾರಂಭದಲ್ಲಿ ನಡೆದ ಸೌಹಾರ್ದ ಕೂಟದ ಮಧ್ಯಾಹ್ನದ ಅನ್ನಸಂತರ್ಪಣೆಗೆ ಶಾಲಾ ಶಿಕ್ಷಕರ ಸಹಿತ ವಿದ್ಯಾರ್ಥಿಗಳಿಗೂ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ಯಾರಿಗೆ ಮಸೀದಿಗೆ ಹೋಗಲು ಮನಸ್ಸಿದೆ ಅವರು ತೆರಳಬಹುದು ಎಂದು ಕಾರ್ಯಕ್ರಮಕ್ಕೆ ಹೋಗಲು ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಸೀದಿಯ ಸೌಹಾರ್ದ ಕೂಟಕ್ಕೆ ತೆರಳಿ, ಅನ್ನಸಂತರ್ಪಣೆಯಲ್ಲಿ ಊಟ ಮಾಡಿದ್ದರು. ಅಲ್ಲದೆ ಅಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮಕ್ಕೂ ಹಾಜರಾಗಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರ ಶಿಕ್ಷಣ ಇಲಾಖೆಯವರೆಗೂ ತಲುಪಿರುವ ಕಾರಣ ಪ್ರಭಾರ ಮುಖ್ಯ ಶಿಕ್ಷಕರಿಗೆ ಕಂಟಕವಾಗಿ ಪರಿಣಮಿಸಿದೆ.
ಪರಿಣಾಮ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ಅವರನ್ನು 10 ದಿನಗಳ ಕಾಲ ರಜೆಯ ಮೇಲೆ ತೆರಳಬೇಕೆಂದು ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶಿಸಿದ್ದಾರೆ.