ಮಂಗಳೂರು: ನಿಂತಿದ್ದ ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿ ಹಲವು ಮಂದಿಯನ್ನು ಅಪಾಯದಿಂದ ಪಾರು ಮಾಡಿದ್ದಾನೆ. ಪುತ್ತೂರು ಸಂತ ಫಿಲೋಮಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಸಿಝಾನ್ ಹಸನ್ ತನ್ನ ಸಮಯ ಪ್ರಜ್ಞೆಯಿಂದ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ. ಈತ ಉಪ್ಪಿನಂಗಡಿಯ ಸಲಾಂ ಎಂಬವರ ಪುತ್ರ.
ನಡೆದ ಘಟನೆ ಬಗ್ಗೆ ವಿದ್ಯಾರ್ಥಿ ಹೇಳಿದ್ದು ಹೀಗೆ:ಈಟಿವಿ ಭಾರತ ಜೊತೆ ಮಾತನಾಡಿದ ಸಿಝಾನ್ ಹಸನ್, ಗುರುವಾರ ಸಂಜೆ 4.25 ಕ್ಕೆ ಕಾಲೇಜಿನಿಂದ ಮನೆಗೆ ತೆರಳಲು ಪುತ್ತೂರು ಬಸ್ಸ್ಟ್ಯಾಂಡ್ಗೆ ಬಂದಿದ್ದೆ. ನಮ್ಮ ಊರಿಗೆ ತೆರಳುವ ಪುತ್ತೂರು ಧರ್ಮಸ್ಥಳ ಎಕ್ಸ್ಪ್ರೆಸ್ ಬಸ್ ಬಂದಿದ್ದು, ಅದನ್ನು ಎಲ್ಲ ವಿದ್ಯಾರ್ಥಿಗಳು ಹತ್ತಿದ್ದರು. ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಚಾಲಕ ಮತ್ತು ನಿರ್ವಾಹಕರು ಬಸ್ನಿಂದ ಇಳಿದು ಹೋಗಿದ್ದರು. ಬಸ್ನಲ್ಲಿ ವಿದ್ಯಾರ್ಥಿಗಳು ತುಂಬಿದ್ದರು.
ಬಸ್ ನಿಂತ ಸುಮಾರು 2 ನಿಮಿಷದ ಬಳಿಕ ಬಸ್ ಏಕಾಏಕಿ ಹಿಮ್ಮುಖವಾಗಿ ಚಲಿಸಲಾರಂಭಿಸಿತು. ನಾನು ಡ್ರೈವರ್ ಸೀಟಿನ ಹಿಂಬದಿಯ ಸೀಟ್ನಲ್ಲಿ ಕುಳಿತಿದ್ದೆ. ಆಗ ಎಲ್ಲರೂ ಆತಂಕಗೊಂಡಿದ್ದು, ನಾನು ಕೂಡಲೇ ಡ್ರೈವರ್ ಸೀಟಿಗೆ ಹೋಗಿ ಬ್ರೇಕ್ ಹಾಕಿದ್ದೇನೆ. ಆಗ ಹಿಮ್ಮುಖವಾಗಿ ಚಲಿಸುತ್ತಿದ್ದ ಬಸ್ ನಿಂತಿದೆ. ಆಗ ಅಲ್ಲೆ ಇದ್ದ ಬೇರೆ ಬಸ್ನ ಕಂಡಕ್ಟರ್ ಬಸ್ ಹತ್ತಿ ಹ್ಯಾಂಡ್ ಬ್ರೇಕ್ ಹಾಕಿದ್ದಾರೆ. ನಾನು ಮನೆಯಲ್ಲಿ ತಂದೆಯ ಕಾರನ್ನು ನೋಡಿ ಅದರ ಬ್ರೇಕ್ ಬಗ್ಗೆ ತಿಳಿದಿದ್ದೆ. ಇದರಿಂದಾಗಿ ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದ ವೇಳೆ ಬ್ರೇಕ್ ಹಾಕಲು ಅನುಕೂಲವಾಯಿತು ಎಂದು ಹೇಳಿದ್ದಾರೆ.