ಮಂಗಳೂರು: ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳ ಮೂಲಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇನ್ನೂ ಸರಿಯಾಗಿ ಪರೀಕ್ಷೆ ಬರೆಯಲು ಸಿದ್ಧರಾಗಿಲ್ಲ. ಆದರೆ ಈ ನಡುವೆ ನಗರದ ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿಯು ಯುಜಿಸಿ ನಿಯಮವನ್ನು ಮೀರಿ ಶೇ.60ರಷ್ಟು ಆಫ್ಲೈನ್ ತರಗತಿ ನಡೆಸದೇ ಪರೀಕ್ಷೆ ನಡೆಸಲು ಹೊರಟಿರುವ ಬಗ್ಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದ.ಕ. ಜಿಲ್ಲಾ ಘಟಕ ದನಿ ಎತ್ತಿದೆ.
ಈ ಬಗ್ಗೆ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ತನುಷ್ ಶೆಟ್ಟಿ ಮಾತನಾಡಿ, ಯುಜಿಸಿ ನಿಯಮದ ಪ್ರಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕಾದರೆ ಶೇ.40ರಷ್ಟು ಆನ್ಲೈನ್ ತರಗತಿ ನಡೆದು, ಶೇ.60ರಷ್ಟು ಆಫ್ಲೈನ್ ತರಗತಿ ನಡೆಯಬೇಕು. ಆದರೆ ಈ ನಿಯಮಗಳನ್ನು ಗಾಳಿಗೆ ತೂರಿ ನಗರದ ಸಂತ ಅಲೋಶಿಯಸ್ ಕಾಲೇಜು ಇದೀಗ ಪದವಿ ಹಾಗೂ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಜುಲೈ 20ರಿಂದ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿದೆ. ಈ ಬಗ್ಗೆ ದನಿ ಎತ್ತಿದ ವಿದ್ಯಾರ್ಥಿಗಳ ದನಿಯನ್ನು ಅಡಗಿಸುವ ಪ್ರಯತ್ನವನ್ನು ಕಾಲೇಜು ಆಡಳಿತ ಮಂಡಳಿ ಮಾಡುತ್ತಿದೆ. ಈ ಸಂಬಂಧ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಾತನಾಡಲು ತೆರಳಿದಾಗ ಅಲ್ಲಿನ ಪ್ರಾಂಶುಪಾಲರು ದಬಾಯಿಸಿ ಹಿಂದೆ ಕಳುಹಿಸಿದ್ದಾರೆ ಎಂದು ತಿಳಿಸಿದರು.