ಬೆಳ್ತಂಗಡಿ (ದಕ್ಷಿಣ ಕನ್ನಡ) : ನೀಟ್ ಪರೀಕ್ಷೆ ಬರೆಯಲು ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಯು ಕಾಲೇಜಿನ ಹಾಸ್ಟೆಲ್ನಲ್ಲಿ ಘಟನೆ ಸಂಭವಿಸಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸನಾವುಲ್ಲ ಎಂಬುವರ ಮಗಳಾದ ಉಮೆ ಉಜ್ಮಾ (19) ಮೃತಪಟ್ಟ ವಿದ್ಯಾರ್ಥಿನಿ. ಪರೀಕ್ಷೆ ಪೂರ್ವ ತಯಾರಿಗೆಂದು ನವೆಂಬರ್ ತಿಂಗಳಿಂದ ಗುರುವಾಯನಕೆರೆ ಎಕ್ಸೆಲ್ ಪಿಯು ಕಾಲೇಜಿನ ಹಾಸ್ಟೆಲ್ನಲ್ಲಿ ಇದ್ದಳು. ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಮೇ 7ರಂದು ನಡೆಯಲಿದ್ದು, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಉಳಿದುಕೊಂಡಿದ್ದಳು.
ವಿದ್ಯಾರ್ಥಿನಿಯು ಶುಕ್ರವಾರ ಮುಂಜಾನೆ ಸುಮಾರು 5 ಗಂಟೆಗೆ ಹಾಸ್ಟೆಲ್ನ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಡಳಿತ ಮಂಡಳಿಯವರು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.