ಕಡಬ (ದ.ಕ):ಶಂಕಿತ ರೇಬಿಸ್ ವೈರಸ್‌ಗೆ ತುತ್ತಾಗಿ ಶಾಲಾ ವಿದ್ಯಾರ್ಥಿನಿಯೊಬ್ಬರು ಬಲಿಯಾದ ದಾರುಣ ಘಟನೆ ಕಡಬ ತಾಲೂಕಿನ ಆಲಂಕಾರಿನಲ್ಲಿ ನಡೆದಿದೆ. ಮೃತಪಟ್ಟವರನ್ನು ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿನ್ಸಿ ಸಾರಮ್ಮ (17) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಏಕಾಏಕಿ ವಿನ್ಸಿಗೆ ತಲೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಪೋಷಕರು ಸ್ಥಳೀಯ ಆಸ್ಪತ್ರೆಯಲ್ಲಿ ಔಷಧ ಕೊಡಿಸಿದ್ದಾರೆ.
ಆದರೆ, ಸಂಜೆ ವೇಳೆಗೆ ಮತ್ತೆ ತಲೆನೋವು ಉಲ್ಬಣಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.
ಸುಮಾರು 4 ತಿಂಗಳ ಹಿಂದೆ ಆಲಂಕಾರು ಪೇಟೆ ಸೇರಿದಂತೆ ಮೃತಳ ಮನೆಯ ಸುತ್ತಮುತ್ತ ಹುಚ್ಚುನಾಯಿ ದಾಳಿ ಮಾಡಿತ್ತು ಎನ್ನಲಾಗಿದೆ. ಈ ಸಮಯದಲ್ಲಿ ಅಲಂಕಾರು ಪೇಟೆಯಲ್ಲೂ ಬೀದಿ ನಾಯಿಗಳು ಇಬ್ಬರ ಮೇಲೆ ದಾಳಿ ನಡೆಸಿತ್ತು. ಮೃತಳ ಮನೆಯ ನಾಯಿಯು ಕೆಲವು ತಿಂಗಳುಗಳ ಹಿಂದೆ ರೇಬೀಸ್‌ಗೆ ಒಳಗಾಗಿ ಸಾವನ್ನಪ್ಪಿತ್ತು ಎನ್ನಲಾಗಿದೆ.
ಅದೇ ನಾಯಿಯಿಂದ ವೈರಸ್ ವಿದ್ಯಾರ್ಥಿನಿಗೂ ತಗಲಿರಬಹುದು ಅಥವಾ ಮನೆಯಲ್ಲಿದ್ದ ಬೆಕ್ಕು ಸೇರಿದಂತೆ ಇತರ ಸಾಕುಪ್ರಾಣಿಗಳಿಂದ ವೈರಸ್ ತಗುಲಿರಬಹುದು ಎಂದು ಶಂಕಿಸಲಾಗಿದೆ.
ಈಟಿವಿ ಭಾರತದ ಜೊತೆ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ವಿದ್ಯಾರ್ಥಿನಿಗೆ ರೇಬೀಸ್ ವೈರಸ್ ತಗುಲಿರುವ ಬಗ್ಗೆ ಯಾವುದೇ ಸ್ಪಷ್ಟ ಮತ್ತು ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ರೇಬೀಸ್ನ ಕೆಲ ರೋಗಲಕ್ಷಣ ಮಾತ್ರ ಕಂಡು ಬಂದಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ರೇಬೀಸ್ ರೋಗವೇ ಅಂತ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅದಕ್ಕೆ ಇನ್ನೂ ಕೆಲವು ಹೆಚ್ಚಿನ ತಪಾಸಣೆಗಳನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ.