ಉಳ್ಳಾಲ (ದಕ್ಷಿಣ ಕನ್ನಡ) : ಮೊದಲ ದಿನ ಕಾಲೇಜಿಗೆ ಹೋಗುವಾಗ ಮನೆಯವರು ಖರ್ಚಿಗೆ ಹಣ ಕೊಡಲಿಲ್ಲವೆಂದು ಡಿಪ್ಲೊಮಾ ವಿದ್ಯಾರ್ಥಿಯೊಬ್ಬ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುತ್ತಾರ್ ಸುಭಾಷನಗರದಲ್ಲಿ ನಡೆದಿದೆ. ನಗರದ ಭಾಸ್ಕರ್ ಪೂಜಾರಿ ಮತ್ತು ಧಾಕ್ಷಾಯಿಣಿ ಎಂಬವರ 17 ವರ್ಷ ವಯಸ್ಸಿನ ಪುತ್ರ ಮೃತ ವಿದ್ಯಾರ್ಥಿ.
ಪ್ರಥಮ ಪಿಯುಸಿಯನ್ನು ಕಪಿತಾನಿಯೋ ದಲ್ಲಿ ಮುಗಿಸಿದ್ದ ಮಗ ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಮಾಡುವ ಆಸಕ್ತಿ ವಹಿಸಿದ್ದರಿಂದ ಪೋಷಕರು ಸೇರಿಸಿದ್ದರು. ನಿನ್ನೆ (ಬುಧವಾರ) 500 ರೂ. ಹಣ ಕೊಟ್ಟು ಕಾಲೇಜಿಗೆ ಮಗನನ್ನು ಕಳುಹಿಸಿದ್ದರು. ಗುರುವಾರ ಸಹ ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ 500 ರೂ. ಕೊಡುವಂತೆ ಕೇಳಿದಾಗ ಪೋಷಕರು ಕೊಟ್ಟಿಲ್ಲ. ಇದರಿಂದ ಕೋಪಗೊಂಡು ಮನೆಯಲ್ಲೇ ಉಳಿದುಕೊಂಡ ಮಗ ತಂದೆ ಮನೆ ಹೊರಗಡೆ ಹಾಗೂ ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತ್ಯೇಕ ಪ್ರಕರಣ- ಮೂರು ಅಂಗಡಿಗಳಲ್ಲಿ ಕಳ್ಳತನ :ತೊಕ್ಕೊಟ್ಟು ಒಳಪೇಟೆಯಲ್ಲಿರುವ ಮೂರು ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ಹಾಗೂ ಸಾಮಗ್ರಿಗಳನ್ನು ಕಳವು ಮಾಡಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಹರಿಶ್ಚಂದ್ರ ಶೆಟ್ಟಿ ಎಂಬವರಿಗೆ ಸೇರಿದ ಲಕ್ಷ್ಮೀ ಕ್ಯಾಂಟೀನ್, ಹ್ಯಾರೀಸ್ ಎಂಬವರಿಗೆ ಸೇರಿದ ಸಿಲ್ವರ್ ಸ್ಟಾರ್ ಎಂಟರ್‌ಪ್ರೈಸ್ ಸ್ಟೀಲ್ ಸಾಮಗ್ರಿಗಳ ಮಾರಾಟ ಮಳಿಗೆ ಹಾಗೂ ಮೋಹನ್ ಎಂಬವರಿಗೆ ಸೇರಿದ ಎಸ್ಎಸ್ ಕಮ್ಯುನಿಕೇಷನ್ಸ್ ಮೊಬೈಲ್ ಅಂಗಡಿಗಳ ಹೆಂಚು ತೆಗೆದು ಒಳನುಗ್ಗಿದ ಕಳ್ಳ ಕ್ಯಾಷ್ ಕೌಂಟರ್ನಲ್ಲಿದ್ದ ನಗದು ಹಾಗೂ ಕೆಲವು ಸಾಮಗ್ರಿಗಳನ್ನು ಕಳವು ಮಾಡಿದ್ದಾನೆ.