ಕಡಬ (ದ.ಕ):ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿದ್ದ ಸುಸಜ್ಜಿತ ಹಸಿಮೀನು ಮಾರಾಟ ಕಟ್ಟಡ ಪಾಳು ಬಿದ್ದು ರಸ್ತೆ ಬದಿಯಲ್ಲಿಯೇ ಮೀನು ಮಾರಾಟಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು.
ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿತ್ತು. ಮೀನು ಮಾರುಕಟ್ಟೆಯ ಆಸುಪಾಸು ದುರ್ವಾಸನೆ ಬೀರುವ ವಾತಾವರಣ ಸೃಷ್ಟಿಯಾಗಿತ್ತು. ಈ ಕುರಿತು ಈಟಿವಿ ಭಾರತ ವಿಸ್ತೃತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಬಿದಿ ಬದಿಯ ಮೀನು ಮಾರಾಟವನ್ನು ಇದೀಗ ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಿದ್ದಾರೆ.
ಬೀದಿ ಬದಿ ಹಸಿಮೀನು ವ್ಯಾಪಾರಕ್ಕೆ ಕೊನೆಗೂ ಮುಕ್ತಿ.. ಅಸಲಿ ಕಥೆ ಏನು?:ಕೆಲವೇ ಕೆಲವು ವರ್ಷಗಳ ಹಿಂದೆ ಹಸಿಮೀನು ಮಾರಾಟಕೋಸ್ಕರ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಕಡಬದ ಅಂದಿನ ಗ್ರಾಪಂ ವತಿಯಿಂದ ಕಟ್ಟಿಸಿದ ಸುಸಜ್ಜಿತ ಕಟ್ಟಡ ಬಳಕೆಯಾಗದೆ ಬಿದ್ದಿತ್ತು. ಸುಸಜ್ಜಿತ ಕಟ್ಟಡ ಇದ್ದರೂ ರಸ್ತೆ ಬದಿಯಲ್ಲಿ ಮೀನು ವ್ಯಾಪಾರ ಮಾಡಲಾಗುತ್ತಿತ್ತು.
ಈ ಕಟ್ಟಡದಲ್ಲಿ ಮೀನು ವ್ಯಾಪಾರ ಮಾಡಿದ್ದಲ್ಲಿ ಗ್ರಾಹಕರಿಗೆ ದರದ ವಿಚಾರದಲ್ಲಿ ಯಾವುದೇ ದೊಡ್ಡ ಮಟ್ಟದ ವಂಚನೆ ನಡೆಯುತ್ತಿರಲಿಲ್ಲ. ಮಾತ್ರವಲ್ಲದೆ ಗ್ರಾಹಕರಿಗೂ ಉತ್ತಮ ಗುಣಮಟ್ಟದ ವಿವಿಧ ರೀತಿಯ ಮೀನುಗಳು ಲಭ್ಯವಾಗುತ್ತಿತ್ತು.
ಈ ಸಮಯದಲ್ಲಿ ಪಂಚಾಯತ್ಗೆ ಆದಾಯವೂ ಹೆಚ್ಚಿಗೆ ಬರುತ್ತಿತ್ತು. ಆದರೆ, ಸಾರ್ವಜನಿಕ ತೆರಿಗೆ ಹಣದಿಂದ ಮಾಡಿದ ಈ ಕಟ್ಟಡವನ್ನು ಅವನತಿಗೆ ತಳ್ಳಿದ ಅಧಿಕಾರಿಗಳು, ಪಂಚಾಯತ್ ಆಡಳಿತ ಮಂಡಳಿ ಮತ್ತು ಜನಪ್ರತಿನಿಧಿಗಳು ಮೀನು ವ್ಯಾಪಾರಿಗಳಿಗೆ ಕಡಬ ಪೇಟೆಯ ರಸ್ತೆಯ ಎರಡು ಕಡೆಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದರು.
ಕಡಬದ ಮೀನು ಮಾರುಕಟ್ಟೆ ಕಟ್ಟಡವನ್ನು ಸೂಕ್ತ ರೀತಿ ಸರಿಪಡಿಸದ ಕಾರಣ,ಮದ್ಯಪಾನದ ಅಡ್ಡೆಯಾಗಿ ಈ ಕಟ್ಟಡ ಬದಲಾಗಿತ್ತು. ಇದೀಗ ಮೀನು ಮಾರುಕಟ್ಟೆ ಸ್ವಚ್ಛಗೊಳಿಸುವ ಮೂಲಕ ಕಡಬ ಪಟ್ಟಣ ಪಂಚಾಯತ್ ಆಡಳಿತ ಮಂಡಳಿ ರಸ್ತೆ ಬದಿಯ ಮೀನು ವ್ಯಾಪಾರಕ್ಕೆ ಅಂತ್ಯ ಹಾಡಿದ್ದಾರೆ.
ಇದನ್ನೂ ಓದಿ:ಕಡಬದಲ್ಲಿ ರಸ್ತೆ ಬದಿ ಮೀನು ಮಾರಾಟಕ್ಕೆ ಅವಕಾಶ: ಅಧಿಕಾರಿಗಳ ಕುತಂತ್ರವೆಂದು ಸ್ಥಳೀಯರ ಆರೋಪ