ಮಂಗಳೂರು: ನಗರದಿಂದ ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ ಮಂಗಳೂರಿನ ಮೀನುಗಾರರಿಗೆ ತಮಿಳುನಾಡಿನಲ್ಲಿ ಕಲ್ಲು ಎಸೆದ ಘಟನೆ ನಡೆದಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ಮಂಗಳೂರಿನ ಬೋಟ್ಗಳ ಮೇಲೆ ತಮಿಳುನಾಡಿನ ಕನ್ಯಾಕುಮಾರಿ ಬಳಿ ಕಲ್ಲು ತೂರಾಟ ನಡೆಸಲಾಗಿದೆ ಎಂದು ದೂರಲಾಗಿತ್ತು. ಕಲ್ಲು ತೂರಾಟದ ಪರಿಣಾಮ ಮಂಗಳೂರಿನ ಬೋಟ್ಗಳಲ್ಲಿದ್ದ ಏಳೆಂಟು ಮಂದಿ ಮೀನುಗಾರರು ಗಾಯಗೊಂಡಿದ್ದರು ಎಂದು ತಿಳಿದುಬಂದಿತ್ತು.
ಈ ಪ್ರಕರಣ ಫೆ.8ರಂದು ನಡೆದಿದ್ದು, ಆಳಸಮುದ್ರ ಮೀನುಗಾರಿಕೆಗೆಂದು ತೆರಳಿದ್ದ ಮಂಗಳೂರಿನ ಏಳೆಂಟು ಬೋಟ್‌ಗಳು ತಮಿಳುನಾಡಿನ ಕನ್ಯಾಕುಮಾರಿ ಬಳಿ ಮೀನುಗಾರಿಕೆಯಲ್ಲಿ ನಿರತವಾಗಿತ್ತು. ಈ ವೇಳೆ ತಮಿಳುನಾಡಿನ ಮೀನುಗಾರರಿಂದ ಕಲ್ಲು ತೂರಾಟದ ಕೃತ್ಯ ನಡೆದಿತ್ತು. ಮಂಗಳೂರಿನಿಂದ ತೆರಳಿದ್ದ ಬೋಟ್ಗಳನ್ನು ಸಮುದ್ರದ ಮಧ್ಯೆ ತಮಿಳು ಮಾತನಾಡುತ್ತಿದ್ದ ಮೀನುಗಾರರಿದ್ದ ಹತ್ತಾರು ಬೋಟ್‌ಗಳು ಸುತ್ತುವರಿದಿದ್ದವು. ಈ ವೇಳೆ ಆ ಬೋಟ್ಗಳಲ್ಲಿ ಇದ್ದ ಕೆಲವರು ಮಂಗಳೂರಿನ ಬೋಟ್ಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು. ಪರಿಣಾಮ ಏಳೆಂಟು ಮೀನುಗಾರರು ಗಾಯಗೊಂಡಿದ್ದರು. ಕಲ್ಲು ತೂರಾಟದ ಘಟನೆಯನ್ನು ಮಂಗಳೂರಿನ ಬೋಟ್ನಲ್ಲಿದ್ದ ಮೀನುಗಾರರು ವಿಡಿಯೋ ಮಾಡಿಕೊಂಡಿದ್ದರು.
ಈ ಬಗ್ಗೆ ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಹರೀಶ್ ಕುಮಾರ್, ತಮಿಳುನಾಡಿನ ಮೀನುಗಾರರು ದೋಣಿಗಳ ಮೇಲೆ ಕಲ್ಲು ಎಸೆದು ಮೀನುಗಾರರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳೂರು ಮೀನುಗಾರರಿಂದ ನಮಗೆ ಮಾಹಿತಿ ಬಂದಿದೆ. ಮೀನುಗಾರರ ಮೇಲೆ ಕಲ್ಲು ತೂರಾಟವನ್ನು ಖಂಡಿಸಬೇಕಾಗಿದೆ. ಒಂದು ವೇಳೆ ನಮ್ಮ ಮೀನುಗಾರರು ನಿಯಮ ಉಲ್ಲಂಘಿಸಿ 12 ನಾಟಿಕಲ್ ಮೈಲು ಅಂತರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಲ್ಲಿ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟವರಿಗೆ ಹಸ್ತಾಂತರಿಸಬಹುದಿತ್ತು. ಮೀನುಗಾರಿಕಾ ಬೋಟ್‌ಗಳು 12 ನಾಟಿಕಲ್ ಮೈಲು ಮೀರಿದ ಮತ್ತು 200 ನಾಟಿಕಲ್ ಮೈಲುಗಳವರೆಗಿನ ವಿಶೇಷ ಆರ್ಥಿಕ ವಲಯದಲ್ಲಿವೆಯೇ ಎಂಬುದನ್ನು ನಾವು ನೋಡಬೇಕಾಗಿದೆ. ಮೀನುಗಾರರಿಗೆ 12 ನಾಟಿಕಲ್ ಮೈಲುಗಳಿಂದ 200 ನಾಟಿಕಲ್ ಮೈಲುಗಳವರೆಗೆ ಮೀನುಗಾರಿಕೆ ದಂಡಯಾತ್ರೆಯನ್ನು ಕೈಗೊಳ್ಳಲು ಅನುಮತಿಸಲಾಗಿದೆ ಎಂದು ಅವರು ಹೇಳಿದರು.