ಮಂಗಳೂರು:ಕೊರೊನಾ ಸೋಂಕು ಎಲ್ಲೆಡೆ ಹರಡುತ್ತಿರುವುದನ್ನು ತಡೆಗಟ್ಟಲು ಮಂಗಳೂರು ಮಹಾನಗರ ಪಾಲಿಕೆಯಿಂದ ಕ್ರಿಮಿನಾಶಕ ಸಿಂಪಡಣೆ ಮಾಡಲಾಯಿತು.
ನೀರಿನೊಂದಿಗೆ ಡೆಟಾಲ್, ಪಿನಾಯಿಲ್ ಹಾಗೂ ಬ್ಲೀಚಿಂಗ್ ಪೌಡರ್ ಮಿಶ್ರಣ ಮಾಡಿ ಮಹಾನಗರ ಪಾಲಿಕೆಯ ಮುಂಭಾಗ ಇಂದು ಮೊದಲ ಬಾರಿಗೆ ಸಿಂಪಡಣೆ ಮಾಡಲಾಯಿತು. ಟ್ಯಾಂಕರ್ಗೆ ಸ್ಪ್ರಿಂಕ್ಲರ್ ಅಳವಡಿಸಿ ಕಾರಂಜಿಯ ಹಾಗೆ ಚಿಮ್ಮುವ ರೀತಿಯಲ್ಲಿ ಪರಿಸರದಲ್ಲಿನ ಕೊರೊನಾ ವೈರಾಣುಗಳನ್ನು ನಾಶ ಮಾಡಲು ಮಹಾನಗರ ಪಾಲಿಕೆ ಕಾರ್ಯಯೋಜನೆ ಕೈಗೊಂಡಿದೆ.
ಕೊರೊನಾ ವೈರಾಣು ನಾಶಕ್ಕೆ ಮಹಾನಗರ ಪಾಲಿಕೆಯಿಂದ ಕ್ರಿಮಿನಾಶಕ ಸಿಂಪಡಣೆ ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಮಾತನಾಡಿ, ಕೊರೊನಾ ವೈರಾಣು ನಾಶ ಮಾಡಲು ಇಂದು ಪ್ರಾಯೋಗಿಕವಾಗಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಜನರ ಪ್ರತಿಕ್ರಿಯೆ ಹಾಗೂ ಇದರ ಪರಿಣಾಮವನ್ನು ಗಮನಿಸಿ ಮುಂದೆ ನಗರದೆಲ್ಲೆಡೆ ಈ ರೀತಿಯಲ್ಲಿ ಕ್ರಿಮಿನಾಶಕ ಸಿಂಪಡಣೆ ಕಾರ್ಯ ಮಾಡಲಾಗುತ್ತದೆ. ಬಸ್ ಸ್ಟ್ಯಾಂಡ್, ಮಾರ್ಕೇಟ್ ಪ್ರದೇಶ, ಜನಸಂದಣಿ ಹೆಚ್ಚು ಇರುವ ಪ್ರದೇಶವನ್ನು ಮೊದಲು ಗಣನೆಗೆ ತೆಗೆದುಕೊಂಡು ಆ ಬಳಿಕ ಬೇರೆ ಬೇರೆ ಪ್ರದೇಶಗಳಲ್ಲಿ ಈ ರೀತಿಯಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತದೆ ಎಂದು ಹೇಳಿದರು.
ಈ ಎರಡು ವಾಹನಗಳ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದ್ದು, ನಾಳೆ ಅಗತ್ಯತೆ ನೋಡಿ ಹೆಚ್ಚು ಮಾಡಲಾಗುವುದು. ಅಲ್ಲದೇ ಇದರಿಂದ ಮಾನವ ಉಸಿರಾಟಕ್ಕೆ ಯಾವುದೇ ತೊಂದರೆಯಾಗೋದಿಲ್ಲ ಎಂದು ಹೇಳಿದರು.