ಮಂಗಳೂರು: ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನಲ್ಲಿ ನಡೆದಿದೆ. ಪುದುವೆಟ್ಟು ನಿವಾಸಿ ಸ್ವರಾಜ್(24) ಆತ್ಮಹತ್ಯೆ ಮಾಡಿಕೊಂಡ ಕಬಡ್ಡಿ ಆಟಗಾರ. ಸ್ವರಾಜ್ ಬೆಳ್ತಂಗಡಿ ತಾಲೂಕಿನ ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಅವರು ತಮ್ಮ ಮನೆಯ ಸ್ನಾನದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ವರಾಜ್ ಕಬಡ್ಡಿಯಲ್ಲಿ ಜಿಲ್ಲಾಮಟ್ಟವನ್ನು ಪ್ರತಿನಿಧಿಸಿ ಪ್ರಸಿದ್ಧಿಯನ್ನು ಪಡೆದಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ- ಪಾರ್ಟ್‌ಟೈಂ ಕೆಲಸದ ಆಮಿಷ ₹10.88 ಲಕ್ಷ ವಂಚನೆ:ಆನ್‌ಲೈನ್‌ನಲ್ಲಿ ಪಾರ್ಟ್‌ಟೈಂ ಕೆಲಸದ ಆಮಿಷ ತೋರಿಸಿ ಬರೋಬ್ಬರಿ 10.88 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಯುಯೇಟ್ ಮೀಡಿಯಾ ಕಂಪನಿಯ ಪ್ರತಿನಿಧಿಯೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ ದೂರುದಾರರಿಗೆ ಆ.26ರಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದ. ಬಳಿಕ ಆನ್‌ಲೈನ್‌ನಲ್ಲಿ ಟಾಸ್ಕ್ಗಳ ಮೂಲಕ ದಿನನಿತ್ಯವೂ 2-3 ಸಾವಿರ ರೂ. ಸಂಪಾದನೆ ಮಾಡಬಹುದು ಎಂದು ಸಂದೇಶವನ್ನು ರವಾನಿಸಿದ್ದಾನೆ. ಇದನ್ನು ನಂಬಿದ ದೂರುದಾರರು ಆತ ಹೇಳಿದಂತೆ ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ.