ಸುಳ್ಯ(ದಕ್ಷಿಣಕನ್ನಡ) :ಜಿಲ್ಲೆಯ ಸುಳ್ಯ, ಕಡಬ ತಾಲೂಕುಗಳಲ್ಲಿ ನೆಲೆಸಿರುವ ಸುಮಾರು 2 ಸಾವಿರ ಶ್ರೀಲಂಕಾ ತಮಿಳು ಕುಟುಂಬಗಳಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಇದರ ನಡುವೆ ಸಂಬಳ ಸೇರಿದಂತೆ ಹಲವು ಸವಲತ್ತುಗಳು ಬಾರದ ಹಿನ್ನೆಲೆಯಲ್ಲಿ ಈ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಆರೋಪಗಳೂ ಕೇಳಿ ಬಂದಿವೆ.
ಶ್ರೀಲಂಕಾದಿಂದ ವಾಪಸಾತಿಯಾದ 2 ಸಾವಿರ ಲಂಕನ್ ತಮಿಳು ಕುಟುಂಬಗಳು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧೀನದಲ್ಲಿ (ಕೆಎಫ್‌ಡಿಸಿ) ಕಾರ್ಯ ನಿರ್ವಹಿಸುವ ಇಲ್ಲಿನ ವಿವಿಧ ರಬ್ಬರ್ ಎಸ್ಟೇಟ್‌ಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಈ ಕುಟುಂಬಗಳ ಜನರು ಸುಳ್ಯ ವಿಧಾನಸಭಾ ವ್ಯಾಪ್ತಿಯ ಬಿಳಿನೆಲೆ, ಮೇದಿನಡ್ಕ ಮತ್ತು ಐವರ್ನಾಡಿನಲ್ಲಿರುವ ಮೂರು ರಬ್ಬರ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಹಿನ್ನೆಲೆ ಏನು? :1964ರಲ್ಲಿ ಆಗಿನ ಶ್ರೀಲಂಕಾ ಪ್ರಧಾನಿ ಸಿರಿಮಾವೋ ಹಾಗೂ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಡುವಿನ ಒಪ್ಪಂದದ ಪ್ರಕಾರ ಶ್ರೀಲಂಕನ್ ನಿರಾಶ್ರಿತರಿಗಾಗಿ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಸುಮಾರು 4,400 ಹೆಕ್ಟೇರ್ ಭೂಮಿಯಲ್ಲಿ ರಬ್ಬರ್ ಬೆಳೆಯಲಾಗಿದೆ. 1,200 ಕಾರ್ಮಿಕರ ಮತ್ತು 360 ಕ್ಷೇತ್ರ ಹಾಗೂ ಕಚೇರಿ ಸಿಬ್ಬಂದಿ ಇಲ್ಲಿ ದುಡಿಯುತ್ತಿದ್ದರು. ಆದರೆ, ಇದೀಗ ಈ 360 ಮಂದಿ ಸಿಬ್ಬಂದಿಯಲ್ಲಿ ಶೇ.60ರಷ್ಟು ಜನರನ್ನು ಏಕಾಏಕಿ ಕೆಲಸದಿಂದ ಕೈಬಿಡಲಾಗಿದೆ ಎನ್ನಲಾಗಿದೆ.
ಈ ಹಿಂದೆ ಇದ್ದ ರಬ್ಬರ್ ತೋಟದ ಮೇಸ್ತ್ರಿಗಳನ್ನು ಹಿಂಬಡ್ತಿ ನೀಡಿ ರಬ್ಬರ್ ಮೂರ್ತೆ ಕೆಲಸಕ್ಕೆ ನಿಯೋಜಿಸಲಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ, ಬಿಪಿಎಲ್ ಕಾರ್ಡ್ ಇಲ್ಲದ, ಬೇರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ವಯೋಮಿತಿ ಮೀರಿದ, 15 ವರ್ಷಕ್ಕೂ ಹೆಚ್ಚು ಕಾಲ ಕನಿಷ್ಠ ಸಂಬಳದಲ್ಲೇ ದುಡಿದ ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.
60ರ ದಶಕದಲ್ಲಿ ಸುಮಾರು 1,852 ಕುಟುಂಬಗಳಿಗೆ ಪುನರ್ವಸತಿ ಕಾರ್ಯವನ್ನು ಒಪ್ಪಿಕೊಂಡ ಅಂದಿನ ಕರ್ನಾಟಕವು ಅವರಿಗೆ ಅರಣ್ಯ ಪ್ರದೇಶಗಳ ಪರಿಧಿಯಲ್ಲಿ ರಬ್ಬರ್ ತೋಟಗಳಲ್ಲಿ ಉದ್ಯೋಗವನ್ನು ಒದಗಿಸಿತು. ಲಭ್ಯ ಮಾಹಿತಿಗಳ ಪ್ರಕಾರ ಒಪ್ಪಂದದ ಭಾಗವಾಗಿ, ಕರ್ನಾಟಕದಲ್ಲಿ ಎರಡು ತಲೆಮಾರುಗಳಿಗೆ ಅಂದರೆ ತಂದೆ ಮತ್ತು ಪುತ್ರರಿಗೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳೊಂದಿಗೆ ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಉದ್ಯೋಗವನ್ನು ನೀಡಬೇಕಾಗಿತ್ತು. ಆದರೂ, ಈಗ ಸರ್ಕಾರವು ಈ ಪ್ರದೇಶದಲ್ಲಿ ಸೌಕರ್ಯ ನೀಡುತ್ತಿರುವುದು ಮೂರನೇ ತಲೆಮಾರಿನವರಿಗೆ ಎನ್ನಲಾಗಿದೆ.
ಆರೋಪ-ಪ್ರತ್ಯಾರೋಪ :ಕೇಂದ್ರ ಅಥವಾ ರಾಜ್ಯದಿಂದ ಯಾವುದೇ ಹೊಸ ಮಾರ್ಗಸೂಚಿಗಳ ಅನುಪಸ್ಥಿತಿಯಲ್ಲಿ ಸರ್ಕಾರವು ಎಲ್ಲ ಸೌಲಭ್ಯಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಲಂಕಾ ತಮಿಳರಿಗೆ ಒದಗಿಸುವ ಸೌಲಭ್ಯಗಳನ್ನು ಪಾವತಿಸಲು ಕೆಎಫ್‌ಡಿಸಿ ಪ್ರತಿ ತಿಂಗಳು ಸುಮಾರು 1 ಕೋಟಿ ರೂಪಾಯಿ ವೆಚ್ಚ ಭರಿಸುತ್ತದೆ ಎಂದು ಅರಣ್ಯ ಇಲಾಖೆಯ ಹೇಳುತ್ತಿದೆ. ಆದರೆ, ಸ್ಥಳೀಯವಾಗಿ ಇಂತಹ ಯಾವುದೇ ಸೌಕರ್ಯ ಲಭ್ಯವಾಗುತ್ತಿಲ್ಲ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ.
ರಾಧಾದೇವಿ ಹೇಳುವುದೇನು? :2012ರಲ್ಲಿ ಆಗಿನ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಕೆಎಫ್‌ಡಿಸಿಗೆ ಮೂರನೇ ತಲೆಮಾರಿನ ವಾಪಸಾತಿದಾರರಿಗೂ ಪ್ರಯೋಜನಗಳನ್ನು ವಿಸ್ತರಿಸುವ ಭರವಸೆ ನೀಡಿ, ಕಾನೂನು ಅಭಿಪ್ರಾಯವನ್ನು ಕೋರಿದ್ದರು. ಇದರ ನಡುವೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಮತ್ತು ಕೆಎಫ್‌ಡಿಸಿಯ ಎಂಡಿ ರಾಧಾದೇವಿ ಅವರು ಕೆಲ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ.